ADVERTISEMENT

ಶಿಕ್ಷಕರ ಕಾಯಂಗೆ ಮಧ್ಯಂತರ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:56 IST
Last Updated 18 ಏಪ್ರಿಲ್ 2013, 19:56 IST

ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದ್ದಾರೆ.

ಕೇಂದ್ರ ಸರ್ಕಾರವು 2009ರ ಮಾರ್ಚ್‌ನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯನ್ನು ಜಾರಿಗೆ ತಂದಿದೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದಲ್ಲೂ ಜಾರಿಗೆ ತಂದ ಈ ಯೋಜನೆಯ ವ್ಯಾಪ್ತಿಗೆ 74 ಪ್ರದೇಶಗಳ ಒಟ್ಟು 304 ಶಾಲೆಗಳನ್ನು ಒಳಪಡಿಸಲಾಗಿದೆ. ಇವನ್ನು `ಆದರ್ಶ ವಿದ್ಯಾಲಯ' ಎಂದು ಕರೆಯಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧನಸಹಾಯ ನೀಡಿವೆ. ಈ ಶಾಲೆಗಳಿಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು.

ಇವರಿಗೆ ತಿಂಗಳಿಗೆ 17 ಸಾವಿರ ರೂಪಾಯಿ ವೇತನ ನಿಗದಿ ಮಾಡಲಾಗಿತ್ತು. ಆದರೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಖಾಸಗಿ ಕಂಪೆನಿಯೊಂದು ಶಿಕ್ಷಕರಿಗೆ ಕೇವಲ 12 ಸಾವಿರ ರೂಪಾಯಿ ವೇತನ ನೀಡುತ್ತಿದೆ. ಕಾರ್ಮಿಕರ ಭವಿಷ್ಯ ನಿಧಿ ಮತ್ತು ಇನ್ನಿತರ ಕಾರಣಗಳನ್ನು ನೀಡಿ ಅದರಲ್ಲಿ 6 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳಲಾಗುತ್ತದೆ ಎಂದೂ ಅರ್ಜಿಯಲ್ಲಿ ದೂರಲಾಗಿದೆ.

ಯೋಜನೆಯ ಅಡಿ ಆರಂಭಿಸಲಾದ ಆದರ್ಶ ವಿದ್ಯಾಲಯಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು 2012ರ ಏಪ್ರಿಲ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.  ಶಾಲೆಗಳಿಗೆ ಹೊಸದಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಆದರ್ಶ ವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು. ಅವರಿಗೆ ಸೇವಾ ಅವಧಿಯ ಪ್ರತಿ ವರ್ಷಕ್ಕೆ ಶೇಕಡ 5ರಷ್ಟು ಕೃಪಾಂಕ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆಯನ್ನು 24ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.