ADVERTISEMENT

ಶಿಕ್ಷಕ, ಉಪನ್ಯಾಸಕರ ನೇಮಕ ಪ್ರಕ್ರಿಯೆ ಆಗಸ್ಟ್‌ಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:30 IST
Last Updated 30 ಮೇ 2012, 19:30 IST

ಬೆಂಗಳೂರು: ಪ್ರೌಢಶಾಲೆಗಳ 3,404 ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ 1,764 ಉಪನ್ಯಾಸಕರ ಹುದ್ದೆಗಳ ನೇಮಕ ಪ್ರಕ್ರಿಯೆ ಆಗಸ್ಟ್‌ಗೆ ಪೂರ್ಣಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಇಲ್ಲಿ ಹೇಳಿದರು.

ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ 2.25 ಲಕ್ಷ  ಅರ್ಜಿಗಳು ಬಂದಿದ್ದು, ಜೂನ್ 23ರಿಂದ 26ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಉಪನ್ಯಾಸಕರ ಹುದ್ದೆಗಳಿಗೆ 95 ಸಾವಿರ ಅರ್ಜಿಗಳು ಬಂದಿವೆ. ಜೂನ್ 12ರಿಂದ 21ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಶಾಲೆಗಳು ಪುನರಾರಂಭವಾಗಿವೆ. ಈಗಾಗಲೇ ಶೇ 90ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಬಾಕಿ ಇರುವ ಪಠ್ಯಪುಸ್ತಕಗಳು ವಾರದಲ್ಲಿ ತಲುಪಲಿವೆ. ಶಾಲೆ ಆರಂಭದಲ್ಲೇ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ದೊರೆತ ಕೂಡಲೇ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು. ಒಂದು ವೇಳೆ ಕಾಯಂ ನೇಮಕಾತಿ ಸಾಧ್ಯವಾಗದಿದ್ದರೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಈ ಹಿಂದೆ ಶಿಕ್ಷಕರು - ಮಕ್ಕಳ ಅನುಪಾತ ರಾಷ್ಟ್ರಮಟ್ಟದಲ್ಲಿ 1:40 ಇತ್ತು. ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರ 1:30ಕ್ಕೆ ಇಳಿದಿದೆ. ಆದರೆ ರಾಜ್ಯದಲ್ಲಿ ಈಗ 1:28 ಅನುಪಾತದಲ್ಲಿ ಶಿಕ್ಷಕರು ಇದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭೌಗೋಳಿಕ ಕಾರಣಗಳಿಂದಾಗಿ ಕೆಲವೆಡೆ ಶಿಕ್ಷಕರ ಕೊರತೆ ಇರಬಹುದು.

ನಿವೃತ್ತಿಯಿಂದ ತೆರವಾಗಿರುವ ಹುದ್ದೆಗಳು ಭರ್ತಿಯಾಗದೆ ಇರಬಹುದು. ಆದರೆ ಒಟ್ಟಾರೆ ವ್ಯವಸ್ಥೆ ನೋಡಿದರೆ ಚೆನ್ನಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ವಾರ್ಷಿಕ 12,500 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆ ಹೊಸ ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ಧವಿದೆ. ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಶಾಲೆಗೆ ದಾಖಲಾದ ಮಗು ಮಧ್ಯದಲ್ಲಿ ಶಾಲೆ ಬಿಡದಂತೆ ನೋಡಿಕೊಳ್ಳಲಾಗುವುದು. ಸದ್ಯ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಶಾಲೆಗೆ ಕರೆತಂದು ದಾಖಲು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.