ADVERTISEMENT

ಶಿಕ್ಷಣ ಇಲಾಖೆ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 19:59 IST
Last Updated 10 ಜನವರಿ 2013, 19:59 IST
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಆಯುಕ್ತರ ಕಚೇರಿಯ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಾಧಕ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರೊಬ್ಬರಿಗೆ ಅಭಿನಂದನೆ ಸಲ್ಲಿಸಲು `ಅಭಿಮಾನಿ'ಗಳ ಧಾವಂತ ಹೀಗಿತ್ತು...           -ಪ್ರಜಾವಾಣಿ ಚಿತ್ರ
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಆಯುಕ್ತರ ಕಚೇರಿಯ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಾಧಕ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರೊಬ್ಬರಿಗೆ ಅಭಿನಂದನೆ ಸಲ್ಲಿಸಲು `ಅಭಿಮಾನಿ'ಗಳ ಧಾವಂತ ಹೀಗಿತ್ತು... -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ)ಗಳು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಡೆಗೂ ಗಮನ ಹರಿಸಬೇಕು' ಎಂದು ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ (ಕಾರ್ಯಕ್ರಮ) ಡಿ.ಬಸವರಾಜ್ ಕಿವಿಮಾತು ಹೇಳಿದರು.

2011-12ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಶ್ರಮಿಸಿದ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಆಯುಕ್ತರ ಕಚೇರಿಯ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.


`ಕೆಲವು ಸಿಆರ್‌ಪಿಗಳು ಶಾಲೆಗಳಿಗೆ ಭೇಟಿ ನೀಡುತ್ತಿಲ್ಲ. ಅವರು ಮೂರು ತಿಂಗಳಿಗೆ ಕನಿಷ್ಠ ಪಕ್ಷ ಮೂರು ಬಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಂದುಕೊರತೆ ನಿವಾರಣೆಗೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು ಹೆಚ್ಚು ಒತ್ತು ನೀಡಬೇಕು' ಎಂದು ಅವರು ಸಲಹೆ ನೀಡಿದರು.

ಈ ಹಿಂದೆ ಶಾಲಾ ಮೂಲಸೌಕರ್ಯ ಹೆಚ್ಚಿಸಲು ಸರ್ವ ಶಿಕ್ಷಣ ಅಭಿಯಾನದ ಅನುದಾನವನ್ನು ಅವಲಂಬಿಸಬೇಕಿತ್ತು. ಅಲ್ಲದೆ ಇದೀಗ ಎಲ್ಲ ಶಾಲೆಗಳಿಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಅದನ್ನು ನಿರ್ವಹಣೆ ಮಾಡುವ ಹೊಣೆ ಹೊತ್ತುಕೊಳ್ಳಬೇಕು. ಈ ಬಾರಿ `ಶಾಲೆಗಾಗಿ ನಾವು ನೀವು' ಕಾರ್ಯಕ್ರಮದ ವೇಳೆಗೆ ದಾನಿಗಳು ರೂ 14 ಕೋಟಿ ನೀಡಿದ್ದಾರೆ ಎಂದು  ತಿಳಿಸಿದರು.

ಪ್ರೌಢಶಿಕ್ಷಣ ಮಂಡಳಿಯ ನಿರ್ದೇಶಕ ಎಂ.ಎನ್.ಬೇಗ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು: ಪ್ರಾಂಶುಪಾಲ ಎಂ.ಮಲ್ಲಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಜಿ.ಆಂಜನಪ್ಪ, ಜಿ.ಆರ್. ಬಸವರಾಜು, ಹಿರಿಯ ಉಪನ್ಯಾಸಕರಾದ ಜೆ.ವಿ.ಭಾರತಿ, ಗಾಯತ್ರಿ ಎಸ್. ಇ, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ಎನ್.ಕನ್ನಯ್ಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸೋಮಲಿಂಗಯ್ಯ, ವೈ.ಗಣೇಶ್, ಆರ್.ಲಕ್ಷ್ಮಯ್ಯ, ರೇಖಾಮಣಿ ಆರ್.ಎಸ್, ಮಹಾದೇವ ರೆಡ್ಡಿ ಡಿ.ಎನ್, ಶಿವ್ಯಾನಾಯ್ಕ, ಮಾರುತಿ ಪ್ರಸಾದ್, ಐಎಆರ್‌ಟಿ ವರದರಾಜು, ಸುರೇಖಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಪಿ.ವಿ.ಶ್ರೀನಿವಾಸ, ಆಂಜನೇಯಲು, ಶಿವಾನಂದ ಮಠದ್, ಜಿ.ಯಲ್ಲಪ್ಪ ನಾಯಕ, ಎಸ್.ಶಿವಮೂರ್ತಿ, ಡಿ.ಪಿ.ಮೃತ್ಯುಂಜಯ, ರಾಮಕೃಷ್ಣಯ್ಯ.

ಪ್ರಶಸ್ತಿ ಪುರಸ್ಕೃತರಾದ ಡಿಡಿಪಿಐ ದರ್ಜೆಯ ಅಧಿಕಾರಿಗಳಿಗೆ ರೂ 10 ಸಾವಿರ, ಹಿರಿಯ ಉಪನ್ಯಾಸಕರು ಹಾಗೂ ಬಿಆರ್‌ಸಿಗಳಿಗೆ ರೂ ಏಳು, ಸಾವಿರ,ಸಿಆರ್‌ಪಿಗಳಿಗೆ ರೂ ಐದು ಸಾವಿರ ನೀಡಲಾಯಿತು.

ಅಭಿಮಾನದ ಕಟ್ಟೆ ಒಡೆದಾಗ

ADVERTISEMENT

ಅಭಿನಂದನೆ ವೇಳೆಗೆ ಪ್ರಶಸ್ತಿ ಪುರಸ್ಕೃತರೊಬ್ಬರ `ಅಭಿಮಾನಿ'ಗಳು ವೇದಿಕೆಗೆ ಧಾವಿಸಿದ್ದರಿಂದ ಸಮಾರಂಭದ ಗೊಂದಲದ ಗೂಡಾಯಿತು. ಬೆಂಗಳೂರು ಉತ್ತರ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ಅಂಜನಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಹಾರ ಹಾಕಿ ಅಭಿನಂದನೆ ಸೂಚಿಸಲು 50ಕ್ಕೂ ಅಧಿಕ ಮಂದಿ ವೇದಿಕೆಗೆ ಧಾವಿಸಿದರು. ಈ ಸಂಭ್ರಮದ ವೇಳೆಗೆ ಸನ್ಮಾನಿತರ ಮೈಸೂರು ಪೇಟ ನೆಲಪಾಲಾಯಿತು. ವೇದಿಕೆಯ ಅಲಂಕಾರ ಚೆಲ್ಲಾಪಿಲ್ಲಿಯಾಯಿತು. ಉಳಿದ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುವ ವೇಳೆಯೂ `ಅಭಿಮಾನಿ'ಗಳು ವೇದಿಕೆಯಲ್ಲೇ ಆಂಜನಪ್ಪ ಅವರನ್ನು ಅಭಿನಂದಿಸುತ್ತಾ ಇದ್ದುದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು.

ಸಮನ್ವಯ ಸಮಿತಿ ರಚನೆಗೆ ಸಚಿವರ ಒಪ್ಪಿಗೆ

ಬೆಂಗಳೂರು: `ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಗೊಂದಲಗಳನ್ನು ನಿವಾರಿಸಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿ ಸಮಿತಿ ರಚನೆಯಾಗುವ ನಿರೀಕ್ಷೆ ಇದೆ' ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಜಂಟಿ ಕ್ರಿಯಾ ಸಮಿತಿಯ ಸದಸ್ಯರು ಭೇಟಿ ಮಾಡಿ ಸಮಾಲೋಚಿಸಿದ ಬಳಿಕ ಅವರು ಈ ವಿಷಯ ತಿಳಿಸಿದರು. `ಪೋಷಕರ ಆದಾಯದ ಮಿತಿಯನ್ನು ರೂ 3.5 ಲಕ್ಷದಿಂದ ಒಂದು ಲಕ್ಷಕ್ಕೆ ಇಳಿಸುವ ಬಗ್ಗೆಯೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಆರ್‌ಟಿಇಗೆ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ನೇಮಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಶಾಲೆಗಳ ಮೇಲೆ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಹಾಗೂ ಶಿಕ್ಷಕರಿಗೆ ಅಗತ್ಯ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದ್ದಾರೆ' ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.