ADVERTISEMENT

ಶಿಕ್ಷಣ ವ್ಯವಸ್ಥೆ ದೋಷ ನಿವಾರಣೆ: ಆಂದೋಲನ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಶಿಕ್ಷಣ ವ್ಯವಸ್ಥೆ ದೋಷ ನಿವಾರಣೆ: ಆಂದೋಲನ ಅಗತ್ಯ
ಶಿಕ್ಷಣ ವ್ಯವಸ್ಥೆ ದೋಷ ನಿವಾರಣೆ: ಆಂದೋಲನ ಅಗತ್ಯ   

ಬೆಂಗಳೂರು: `ನಮ್ಮಲ್ಲಿ ಬುದ್ಧಿವಂತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ವ್ಯವಸ್ಥೆಯ ಪ್ರವೃತ್ತಿಯಲ್ಲಿ ದೋಷ ಇದೆ. ಆ ದೋಷ ನಿವಾರಣೆಗೆ ಆಂದೋಲನ ನಡೆಯಬೇಕು~ ಎಂದು ಬೆಂಗಳೂರು ಗ್ರಾಮಾಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ. ವೆಂಕಟೇಶಪ್ಪ ಪ್ರತಿಪಾದಿಸಿದರು.

ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಹಾಗೂ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯ (ಐಐಎಂ) ಆಶ್ರಯದಲ್ಲಿ ಐಐಎಂ ಸಭಾಂಗಣದಲ್ಲಿ ಬುಧವಾರ ನಡೆದ `ಶಿಕ್ಷಣ ಸೇರ್ಪಡೆ ಹಾಗೂ ಸಾಮಾಜಿಕ ಅಸಮಾನತೆಗಳ ನಿವಾರಣೆ~ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

`ಶಿಕ್ಷಣ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನಿವಾರಣೆ ಆಗಿಲ್ಲ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ದೊಡ್ಡ ಮನಸ್ಸಿನ ಸಣ್ಣ ಮಕ್ಕಳಿಗೆ ಗುಣಾತ್ಮಕ ಬೆಂಬಲ ನೀಡಬೇಕು~ ಎಂದು ಅವರು ಸಲಹೆ ನೀಡಿದರು.

`ಯಾವ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬೇಕು ಎಂದು ಬಯಸುವುದಿಲ್ಲ. ಮಕ್ಕಳು ಕಲಿಕೆಗೆ ಸಿದ್ಧರಿದ್ದಾರೆ. ಪರೀಕ್ಷೆಯ ಬಗ್ಗೆ ಅನಗತ್ಯ ಭೀತಿ ಮೂಡಿಸಲಾಗುತ್ತಿದೆ. ಶಿಕ್ಷಕರು ಆ ಭೀತಿಯನ್ನು ಹೋಗಲಾಡಿಸಬೇಕು. ಪರೀಕ್ಷೆಯು ಹಬ್ಬದಂತಾಗಬೇಕು~ ಎಂದು ಅಭಿಪ್ರಾಯಪಟ್ಟರು.

`ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರು ಶೇ 70 ಮಂದಿ ಮಾತ್ರ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಶೇ 30 ಮಂದಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಬಡಗಿ, ಮೆಕ್ಯಾನಿಕ್, ಚಾಲಕ, ಕೃಷಿಕ ಮತ್ತಿತರ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನ ಸಮಯದಲ್ಲಿ ಶಿಕ್ಷಿತರು ಇವರನ್ನು ಜಾಸ್ತಿ ಅವಲಂಬಿಸುತ್ತಾರೆ. ಪರೀಕ್ಷಾ ಯಶಸ್ಸೇ ಜೀವನದ ಯಶಸ್ಸಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು~ ಎಂದರು.

ತಮಿಳುನಾಡಿನ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ವಿಜಯ ಕುಮಾರ್ ಮಾತನಾಡಿ, `ದೇಶದಲ್ಲಿ ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೇ 97ರಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಗತ್ಯ ಶಿಕ್ಷಕರು ಇದ್ದಾರೆ. ಆದರೆ ಉತ್ತೀರ್ಣ ಪ್ರಮಾಣ ಶೇ 60ಕ್ಕಿಂತಲೂ ಕಡಿಮೆ. ಗುಣಾತ್ಮಕ ಶಿಕ್ಷಣದ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಕರ ಸಬಲೀಕರಣ ಆಗಬೇಕು~ ಎಂದು ಸಲಹೆ ನೀಡಿದರು.

`ಯೋಜನೆ 1947~ ಸ್ವಯಂಸೇವಾ ಸಂಘಟನೆಯ ಯೋಜನಾ ನಿರ್ದೇಶಕ ನರೇಶ್ ಬಾಲ ಮಾತನಾಡಿ, `ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಸುಧಾರಣೆಯಾಗಬೇಕು. ಈಗಿನ ಮೌಲ್ಯಮಾಪನಾ ವ್ಯವಸ್ಥೆಯಲ್ಲಿ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಶೇ 30ರಷ್ಟು ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರು ಇಲ್ಲ. ಈ ಎಲ್ಲ ಸಮಸ್ಯೆಗಳ ನಿವಾರಣೆ ಆಗಬೇಕು~ ಎಂದರು.

ಭಾರತೀಯ ಏಕಲ್ ಶಿಕ್ಷಣ ಪ್ರತಿಷ್ಠಾನದ ಯೋಜನಾ ಸಂಯೋಜಕ ಡಾ.ಸಿ. ಸತೀಶ್ ಕುಮಾರ್ ವಿಷಯ ಮಂಡಿಸಿ, `ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇಂಗ್ಲಿಷ್ ಭಾಷಾ ಬಳಕೆಯೇ ಇಲ್ಲ. ಆದರೂ ಆ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಿವೆ. ನಮ್ಮಲ್ಲಿ ಇಂಗ್ಲಿಷ್ ಭಾಷಾ ಮೋಹ ಅತಿಯಾಗಿದೆ. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಉತ್ತಮ. ಒಂದು ವಿಷಯವಾಗಿ ಇಂಗ್ಲಿಷ್ ಕಲಿಸಿದರೆ ಸಾಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು~ ಎಂದರು.

ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, `ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿದ್ದು, ತಕ್ಕಮಟ್ಟಿಗೆ ಸಮಸ್ಯೆ ಪರಿಹಾರ ಆಗಬಹುದು~ ಎಂದರು.  ಐಐಎಂನ ಪ್ರಾಧ್ಯಾಪಕಿ ಪ್ರೊ. ನಯನಾ ತಾರಾ, ಪ್ರೊ. ಡಿ.ವಿ.ಆರ್. ಶೇಷಾದ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.