ADVERTISEMENT

ಶಿಕ್ಷಣ ಹಕ್ಕುಗಳ ಜಾರಿಗೆ ಕ್ರಮ ಕೈಗೊಳ್ಳಲು ಆಗ್ರಹ

ಶಾಲೆಗಳಲ್ಲಿ ಮೂಲ‌ಸೌಕರ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:44 IST
Last Updated 6 ಏಪ್ರಿಲ್ 2018, 19:44 IST

ಬೆಂಗಳೂರು: ‘ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು. ಮಕ್ಕಳಿಗೆ ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡುವ ಯೋಜನೆಯೊಂದಿಗೆ ಶಾಲೆಗಳಲ್ಲಿ ಅಗತ್ಯ ಮೂಲ‌ಸೌಕರ್ಯಗಳನ್ನು ಶೀಘ್ರವಾಗಿ ಒದಗಿಸಿಕೊಡುವ ಬಗೆಗೂ ಚಿಂತನೆ ನಡೆಯಬೇಕು‘ ಎಂಬ ಕೂಗು ಮಾನವಹಕ್ಕುಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.

ಶಿಕ್ಷಣಕ್ಕಾಗಿ ರಾಷ್ಟ್ರೀಯ ಒಕ್ಕೂಟ (ಎನ್‌ಸಿಇ) ಶುಕ್ರವಾರ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನ ಆರಾಧ್ಯ ಮಾತನಾಡಿ, ‘ಶಿಕ್ಷಣದ ಹಕ್ಕುಗಳನ್ನು ಸರ್ಕಾರ ಎಷ್ಟರ ಮಟ್ಟಿಗೆ ಗೌರವಿಸುತ್ತದೆ, ಎಷ್ಟರ ಮಟ್ಟಿಗೆ ಸಾಕಾರಗೊಳಿಸಿದೆ ಎಂದು ಚಿಂತಿಸಿದಾಗ ಸನ್ನಿವೇಶ ಬಹಳ ಆತಂಕಕಾರಿ ಸ್ಥಿತಿಯಲ್ಲಿದೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಸಾಕಷ್ಟು ನಿಯಮಗಳು ಜಾರಿಯೇ ಆಗಿಲ್ಲ’ ಎಂದರು.

‘ಶಿಕ್ಷಕರಿಲ್ಲ, ಮೂಲಸೌಕರ್ಯಗಳಿಲ್ಲ, ಮಕ್ಕಳಿಗೆ ಪಾಠ ಹೇಳಿಕೊಡುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಮಕ್ಕಳಿಗೆ ಕಲಿಯಲು ಬೇಕಾಗುವ ವಾತಾವರಣವನ್ನು ನಿರ್ಮಾಣ ಮಾಡುತ್ತಿಲ್ಲ. ವ್ಯವಸ್ಥೆಯಲ್ಲಿರುವ ಲೋಪದೋಷದಿಂದಾಗಿ ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆ ಬಂದು ಎಂಟು ವರ್ಷಗಳೇ ಕಳೆದಿದ್ದರೂ ಸಾಧನೆ ಶೇಕಡ 8.1ರಷ್ಟು ಮಾತ್ರ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ಶಿಕ್ಷಣ ಹಕ್ಕುಗಳ ಬಗೆಗೆ ಮಾತನಾಡಿದ ಅಕ್ಕೈ ಪದ್ಮಸಾಲಿ, ‘ಕೇರಳ, ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳದಂಥ ಕೆಲವು ರಾಜ್ಯಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡುವ ಬಗ್ಗೆ ನೀತಿಗಳನ್ನೇನೋ ರೂಪಿಸಿವೆ. ಆದರೆ, ಅದನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಶೂನ್ಯಸಾಧನೆ ಮಾಡಿವೆ’ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, 10 ರಾಜ್ಯಗಳ ಶಿಕ್ಷರು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.