ADVERTISEMENT

ಶಿಷ್ಟಾಚಾರ: ಪರಿಷ್ಕೃತ ಆದೇಶಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಶಾಸಕರ ಸ್ಥಾನಮಾನ, ಕಾರಿನ ಮೇಲೆ ಕೆಂಪುದೀಪ ಬಳಕೆ ಇತ್ಯಾದಿ ಶಿಷ್ಟಾಚಾರಗಳಿಗೆ ಸಂಬಂಧಿಸಿದ ಪರಿಷ್ಕೃತ ಆದೇಶವನ್ನು ಈ ಅಧಿವೇಶನ ಮುಗಿಯುವುದರ ಒಳಗಾಗಿ ಹೊರಡಿಸಿ ಸದನದಲ್ಲಿ ಪ್ರಕಟಿಸಬೇಕು ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಸರ್ಕಾರಕ್ಕೆ ಸೂಚಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಸಿ.ಪಾಟೀಲ, ಎಂ.ನಾರಾಯಣಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ ಮೊದಲಾದವರು ಮಾಡಿದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಅವರು ನೀಡಿದ ಉತ್ತರ ಸದಸ್ಯರಿಗೆ ತೃಪ್ತಿ ತರಲಿಲ್ಲ.

ಆಗ ಮಧ್ಯಪ್ರವೇಶಿಸಿದ ಬೋಪಯ್ಯ, ಶಿಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಬಿ.ಸಿ.ಪಾಟೀಲ ಅವರಿಗೆ ಹಕ್ಕುಚ್ಯುತಿಯಾಗಿರುವ ಪ್ರಕರಣದಲ್ಲಿ ನ್ಯಾಯಾಂಗದ ವಿಚಾರವೂ ಸೇರಿರುವುದರಿಂದ ಪರಿಶೀಲನೆ ನಡೆಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದರು.

ಹಿರೇಕೆರೂರಿನಲ್ಲಿ 17ರಂದು ನಡೆದ ವಕೀಲರ ಭವನ ಮತ್ತು `ರೆಕಾರ್ಡ್ಸ್ ರೂಮ್~ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರು ವಹಿಸಿದ್ದರು. ಶಾಸಕರಿಗೆ ಅಧ್ಯಕ್ಷತೆ ವಹಿಸಲು ಅವಕಾಶ ನೀಡದೆ ಅಗೌರವ ತೋರಲಾಗಿದೆ. ಆದ್ದರಿಂದ ಈ ವಿಷಯವನ್ನು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮಾತನಾಡಿ, `ಮೈಸೂರಿನಲ್ಲಿ ನಡೆದ `ಸವಲತ್ತುಗಳ ಸಂತೆ~ ಕಾರ್ಯಕ್ರಮದಲ್ಲಿ ನನ್ನ ಕ್ಷೇತ್ರದವರಿಗೂ ಸೌಲಭ್ಯಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ~ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.