ADVERTISEMENT

ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 18:30 IST
Last Updated 23 ಆಗಸ್ಟ್ 2012, 18:30 IST

ಬೆಂಗಳೂರು: ರಾಜ್ಯದಾದ್ಯಂತ ಸಮರ್ಪಕವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜೋಡಿ ಕುದುರೆ ಸಾರೋಟ್‌ನಲ್ಲಿ ಶೌಚಾಲಯದ ಉಪಕರಣಗಳನ್ನು ಇಟ್ಟುಕೊಂಡು ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, `ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದೇ ರಾಜ್ಯದ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ.
 
ಗ್ರಾಮೀಣ ಪ್ರದೇಶದ ಮಹಿಳೆಯರು ಮೂತ್ರ ವಿಸರ್ಜನೆಗೆ ಹೋಗುವುದಾದರೆ ಕತ್ತಲಾಗುವವರೆಗೂ ಕಾಯಬೇಕು. ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ನಾವು ಬದುಕು ನಡೆಸುತ್ತಿರುವುದು ವಿಷಾದನೀಯ. ಕೇಂದ್ರ ಸರ್ಕಾರ ಕೂಡಲೇ ರಾಜ್ಯದಲ್ಲಿ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಬೇಕು~ ಎಂದು ಒತ್ತಾಯಿಸಿದರು.

`ಒಂದು ಗ್ರಾಮಕ್ಕೆ ಕನಿಷ್ಠ ಐದು ಮಹಿಳಾ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಪ್ರತಿ ಶೌಚಾಲಯದ ನಿರ್ಮಾಣಕ್ಕೆ ಕನಿಷ್ಠ ಹತ್ತು ಲಕ್ಷ ರೂಪಾಯಿ ವೆಚ್ಚ ಮಾಡಿ ಸೂಕ್ತ ನೀರಿನ ವ್ಯವಸ್ಥೆಗೆ ಮತ್ತು ಶುಚಿತ್ವಕ್ಕೆ ಒತ್ತು ನೀಡಬೇಕು. ನಗರದ ಜನಸಂಖ್ಯೆ ಸುಮಾರು ಒಂದು ಕೋಟಿಯಷ್ಟಿದ್ದು, ಪ್ರತಿದಿನ ನಗರಕ್ಕೆ ಬಂದು ಹೋಗುವವರು ಸೇರಿದರೆ ಜನಸಂಖ್ಯೆ ಒಂದೂವರೆ ಕೋಟಿ ಮೀರುತ್ತದೆ. ಆದರೆ, ಶೌಚಾಲಯಗಳಿಲ್ಲದೆ ನಾಗರಿಕರು ಪರದಾಡುವಂತಾಗಿದೆ~ ಎಂದರು.

`ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಸೇರಿದಂತೆ ನಗರಕ್ಕೆ ಸುಮಾರು ಹದಿನೈದು ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಜತೆಗೆ ಎಲ್ಲಾ ಹೆದ್ದಾರಿ ರಸ್ತೆಗಳಲ್ಲಿ ಪ್ರತಿ ಐದು ಕಿ.ಮೀಗೆ ಒಂದರಂತೆ ಶೌಚಾಲಯ ನಿರ್ಮಿಸಬೇಕು. ಆಸ್ಪತ್ರೆ, ಬಸ್ ಮತ್ತು ರೈಲು ನಿಲ್ದಾಣಗಳು, ಪೊಲೀಸ್ ಠಾಣೆ, ಕಲ್ಯಾಣ ಮಂಟಪ, ಚಿತ್ರಮಂದಿರಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳು ಕೊಳೆತು ನಾರುತ್ತಿದ್ದು ಸರ್ಕಾರ ಶುಚಿತ್ವದ ಕಡೆಗೆ ಗಮನ ಹರಿಸಬೇಕು~ ಎಂದು ವಾಟಾಳ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.