ADVERTISEMENT

ಶ್ರದ್ಧಾ–ಭಕ್ತಿಯಿಂದ ಗುರು ಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಮಹಾಬೋಧಿ ಸೊಸೈಟಿಯಲ್ಲಿ ಬೌದ್ಧ ಬಿಕ್ಕುಗಳು ಪ್ರಾರ್ಥನೆ ಸಲ್ಲಿಸಿದರು– ಪ್ರಜಾವಾಣಿ ಚಿತ್ರಗಳು
ಮಹಾಬೋಧಿ ಸೊಸೈಟಿಯಲ್ಲಿ ಬೌದ್ಧ ಬಿಕ್ಕುಗಳು ಪ್ರಾರ್ಥನೆ ಸಲ್ಲಿಸಿದರು– ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಗುರುಪೂರ್ಣಿಮೆಯನ್ನು ನಗರದಲ್ಲಿ ಭಾನುವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಹಿಂದೂ, ಜೈನ, ಬೌದ್ಧ  ಮತ್ತು ಸಿಖ್‌ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಆಚರಣೆಗಳು ನಡೆದವು. ಜನರಿಗೆ ಗುರುರೂಪದಲ್ಲಿ ಮಾರ್ಗದರ್ಶನ ಮಾಡಿದ ಶಿರಡಿ ಸಾಯಿಬಾಬಾ, ರಾಘವೇಂದ್ರಸ್ವಾಮಿ, ಬುದ್ಧ  ಹಾಗೂ ಮಹಾವೀರ ಮಂದಿರಗಳಲ್ಲಿ ಅಭಿಷೇಕ, ಹೋಮ–ಹವನ, ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ಜರುಗಿದವು. 

ಭಕ್ತಾದಿಗಳು ಧಾರ್ಮಿಕ ಕೇಂದ್ರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಗುರುವಂದನೆ ಸ್ವೀಕರಿಸಿದರು. ಇಷ್ಟಲಿಂಗ ಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು.
ಕೆಂಪೇಗೌಡ ಬಡಾವಣೆಯ ಸಾಯಿಬಾಬಾ ಮಂದಿರದಲ್ಲಿ ಕಲಾವಿದರು ಪ್ರಸ್ತುತಪಡಿಸಿದ ಸಾಯಿಬಾಬಾ ಸ್ತುತಿಗೀತೆಗಳಿಗೆ ಭಕ್ತಾದಿಗಳು ತಲೆದೂಗಿದರು.
ತ್ಯಾಗರಾಜನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ವಿಶೇಷ ಭಜನೆ, ಆರತಿ, ಸತ್ಯನಾರಾಯಣ ಪೂಜೆ ನಡೆದವು. ಅರಮನೆ ರಸ್ತೆಯ ಚಕ್ರವರ್ತಿ ಬಡಾವಣೆಯಲ್ಲಿ ದತ್ತಗುರು ಆಧ್ಯಾತ್ಮಿಕ ಧ್ಯಾನ ಕೇಂದ್ರದ ವತಿಯಿಂದ ಗಣಪತಿ ಮತ್ತು ದತ್ತಾತ್ರೇಯ ಮೂರ್ತಿಗಳಿಗೆ ಅಭಿಷೇಕ, ಸದಾನಂದ ಸ್ವಾಮೀಜಿಯ ಮೆರವಣಿಗೆ, ಪಾದಪೂಜೆ ನಡೆಯಿತು.


ಬೌದ್ಧ ಬಿಕ್ಕುಗಳು ಗಾಂಧಿ ನಗರದಲ್ಲಿರುವ ಮಹಾಬೋಧಿ ಬೌದ್ಧ ವಿಹಾರದಲ್ಲಿ  ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಿನ ಮಂದಿರಗಳಲ್ಲೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ವಿಶೇಷ ಪೂಜೆ, ದತ್ತಮಾಲಾ ಹೋಮ
ಹೊಸಕೋಟೆ :ಗುರು ಪೂರ್ಣಿಮೆ ಪ್ರಯುಕ್ತ ಪಟ್ಟಣದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಲೋಕ ಕಲ್ಯಾಣಕ್ಕಾಗಿ ದತ್ತಮಾಲಾ ಹೋಮ ಏರ್ಪಡಿಸಲಾಗಿತ್ತು. ಸಂಜೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಯಿಬಾಬಾರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.