ADVERTISEMENT

ಶ್ರೀರಂಗಪಟ್ಟಣದಲ್ಲಿ ಬಿಪಿಓ ಉದ್ಯೋಗಿಗೆ ಥಳಿಸಿ ದರೋಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:40 IST
Last Updated 5 ಜನವರಿ 2012, 19:40 IST

ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಪ್ರಯುಕ್ತ ಆದಿ ರಂಗನ ದರ್ಶನಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ  ಬೆಂಗಳೂರಿನ ಬಿಪಿಓ ಸಂಸ್ಥೆಯೊಂದರ ಉದ್ಯೋಗಿ ಅರುಣ್‌ಕುಮಾರ್ ಎಂಬುವವರನ್ನು ಐವರು ದುಷ್ಕರ್ಮಿಗಳ ಗುಂಪು ಮನಸೋ ಇಚ್ಛೆ ಥಳಿಸಿ ಹಣ, ಮೊಬೈಲ್ ಹಾಗೂ ಕೈ ಗಡಿಯಾರ ಅಪಹರಿಸಿರುವ ಪ್ರಕರಣ ಗುರುವಾರ ಮುಂಜಾನೆ ಇಲ್ಲಿ ನಡೆದಿದೆ.

ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದ ಅರುಣ್‌ಕುಮಾರ್ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಇದ್ದ ವೇಳೆ ಅವರನ್ನು ಕಾವೇರಿ ನದಿ ಸಮೀಪದ ಆಂಜನೇಯ ಗುಡಿಯ ಬಳಿಗೆ ಎಳೆದೊಯ್ದು ಈ ಕೃತ್ಯ ಎಸಗಿದ್ದಾರೆ.

ಮುಂಜಾನೆ ಮೂರು ಗಂಟೆಗೆ ಈ ಘಟನೆ ನಡೆದಿದೆ. ಅಯ್ಯಪ್ಪಸ್ವಾಮಿ ಭಕ್ತರಂತೆ ವೇಷ ತೊಟ್ಟಿದ್ದ ಐವರ ದುಷ್ಕರ್ಮಿಗಳ ಗುಂಪು ಅರುಣ್‌ಕುಮಾರ್ ಅವರಿಗೆ ಬಡಿಗೆಯಿಂದ ತೀವ್ರವಾಗಿ ಥಳಿಸಿದೆ.

ಅರುಣ್‌ಕುಮಾರ್ ಬಳಿ ಇದ್ದ ಎರಡು ಎಟಿಎಂ ಕಾರ್ಡ್‌ಗಳನ್ನು ಕಸಿದುಕೊಂಡ ದುಷ್ಕರ್ಮಿಗಳು ಅದರ ಸೀಕ್ರೆಟ್ ಕೋಡ್ ಹೇಳುವಂತೆ ಒತ್ತಾಯಿಸಿದ್ದಾರೆ. ಬಾಯಿ ಬಿಡದ ಕಾರಣಕ್ಕೆ ಮನಬಂದಂತೆ ಹೊಡೆದಿದ್ದಾರೆ.

ಅರುಣ್‌ಕುಮಾರ್ ಅವರ ಕಾಲು, ಮುಖ ಊದಿಕೊಂಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಪಿಐ ವೆಂಕಟೇಶ್‌ಮೂರ್ತಿ ತಿಳಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.