ADVERTISEMENT

ಸಂಘ ಪರಿವಾರದ ವಿರುದ್ಧ ಪಿತೂರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 20:00 IST
Last Updated 19 ಫೆಬ್ರುವರಿ 2011, 20:00 IST

ಬೆಂಗಳೂರು: ‘ಹಿಂದೂ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ಸಂಘ ಪರಿವಾರದ ವಿರುದ್ಧ ವ್ಯವಸ್ಥಿತ ರಾಜಕೀಯ ಪಿತೂರಿ ನಡೆಯುತ್ತಿದೆ’ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ‘ಮಂಥನ ವೈಚಾರಿಕ ವೇದಿಕೆ’ ಏರ್ಪಡಿಸಿದ್ದ ‘ಹಿಂದೂ ಭಯೋತ್ಪಾದನೆ ಎಂಬ ಮಿಥ್ಯ’ ವಿಷಯ ಕುರಿತು ಮಾತನಾಡಿದ ಅವರು, ‘ಈ ಪಿತೂರಿಯಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹಾಗೂ ವಿವಿಧ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ’ ಎಂದು ಆರೋಪ ಮಾಡಿದರು.

‘ಈ ಮೂಲಕ ಹಿಂದೂ ಚಳವಳಿಗೆ ಹಿನ್ನಡೆ ತರುವ, ಸಾಧ್ಯವಾದರೆ ನಿರ್ನಾಮ ಮಾಡುವ ಉದ್ದೇಶ ಹೊಂದಲಾಗಿದೆ.ಆರ್‌ಎಸ್‌ಎಸ್ ಯಾವತ್ತೂ ಭಯೋತ್ಪಾದಕ ಕೃತ್ಯ ಎಸಗುವುದಿಲ್ಲ. ಸಂಘದ ನಾಯಕರನ್ನು ತನಿಖೆಗೆ ಒಳಪಡಿಸುವುದಾದರೆ ಅದಕ್ಕೆ ನಾವು ಸಿದ್ಧ’ ಎಂದು ಅವರು ಹೇಳಿದರು.

‘ತನಿಖಾ ಸಂಸ್ಥೆಗಳು ಹಿಂದೂ ಭಯೋತ್ಪಾದನೆ ಎಂದು ಹೇಳಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್‌ಕುಮಾರ್ ಅವರನ್ನು ದೆಹಲಿಯಲ್ಲಿ ತನಿಖೆ ಮಾಡುವುದಾಗಿ ಹೇಳಿದರು.ತನಿಖೆಗಾಗಿ ತಮ್ಮ ಕಚೇರಿಗೆ ಕರೆಸಿಕೊಂಡ ಸಿಬಿಐ ಅಧಿಕಾರಿಗಳು ಏಳು ಗಂಟೆಗಳ ಕಾಲ ತನಿಖೆ ನಡೆಸಿ, ನಿಮ್ಮ ಅಣ್ಣನ ಸೊಸೆಯ ಹೆಸರೇನು, ನಿಮ್ಮ ಮನೆತನದ ಹೆಸರಿನ ಸ್ಪೆಲ್ಲಿಂಗ್ ಏನು ಎಂಬಂಥ ಹಾಸ್ಯಾಸ್ಪದ ಪ್ರಶ್ನೆಗಳನ್ನು ಕೇಳಿದರೇ ಹೊರತು ಪ್ರಕರಣಕ್ಕೆ ಸಂಬಂಧಪಟ್ಟ ಒಂದೇ ಒಂದು ಪ್ರಶ್ನೆಯನ್ನು ಕೇಳಿಲಿಲ್ಲ’ ಎಂದು ಹೇಳಿದರು.

ವಿಭಿನ್ನ ಹೇಳಿಕೆ: ‘ಕಾಂಗ್ರೆಸ್ ನಾಯಕರು ಭಯೋತ್ಪಾದನೆಯ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ‘ಭಯೋತ್ಪಾದನೆಗೆ ಆರ್‌ಎಸ್‌ಎಸ್ ಕಾರಣ’ ಎಂದು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ವಕ್ತಾರರೊಬ್ಬರು ‘ಭಯೋತ್ಪಾದನೆಗೆ ಬಣ್ಣವಿಲ್ಲ’ ಎಂದು ಹೇಳುತ್ತಾರೆ.ಯಾವುದು ಸತ್ಯ’ ಎಂದು ಅವರು ವ್ಯಂಗ್ಯವಾಡಿದರು.

‘ಮಾಲೇಗಾಂವ್, ಅಜ್ಮೇರ್ ದರ್ಗಾ ಸ್ಫೋಟದಲ್ಲಿ ಲಷ್ಕರ್-ಎ-ತೊಯ್ಬಾ ಹಾಗೂ ಅಲ್‌ಖೈದಾ ಸಂಘಟನೆಗಳ ಕೈವಾಡವಿದೆ ಎಂದು ಇಂಟರ್‌ಪೋಲ್ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದರೂ, ಸಿಬಿಐ, ಹಿಂದೂ ಸಂಘಟನೆಗಳನ್ನು ಈ ಪ್ರಕರಣದಲ್ಲಿ ಸಿಕ್ಕಿಸುವ ಉದ್ದೇಶದಿಂದ ಆ ಮಾತನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.