ADVERTISEMENT

ಸಂಚಾರ ನಿಯಂತ್ರಣಕ್ಕೆ ರಸ್ತೆ ವಿಸ್ತರಣೆ ಪರಿಹಾರವಲ್ಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಬೆಂಗಳೂರು: `ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ರಸ್ತೆ ವಿಸ್ತರಣೆಯೇ ಏಕೈಕ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ ಆದರೆ, ಇದು ಶಾಶ್ವತ ಪರಿಹಾರವಲ್ಲ~ ಎಂದು ಪರಿಸರ ರಕ್ಷಣಾ ತಂಡದ ಲಿಯೋ ಸಲ್ಡಾನಾ ಅವರು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಗಳು ಇವೆಲ್ಲವೂ ಪ್ರಗತಿಪರ ಹಾಗೂ ಸೇರ್ಪಡಿಕೆಯ ಪರಿಹಾರಗಳನ್ನು ನೀಡುವ ಹೊಣೆಗಾರಿಕೆಯನ್ನು ಹೊಂದಿದ ಸಂಸ್ಥೆಗಳು. ಆದರೆ, ನಗರಕ್ಕೆ ಆಪತ್ಕಾರಿಯಾದ ಯೋಜನೆಗಳನ್ನು  ಹೇರುತ್ತಿವೆ~ ಎಂದರು.

`ರಸ್ತೆ ವಿಸ್ತರಣೆ, ಸಿಗ್ನಲ್ ಮುಕ್ತ ಮಾರ್ಗಗಳು, ಮೆಟ್ರೊ ವಿಸ್ತರಣೆ, ವಿಮಾನ ನಿಲ್ದಾಣಕ್ಕೆ ಅತ್ಯಧಿಕ ವೆಚ್ಚದ ವೇಗದ ರೈಲು ಸಂಪರ್ಕ ಇವೆಲ್ಲ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರಗಳೆಂದು ಅಧಿಕೃತವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಆದರೆ, ಈ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳುವಾಗ ಜನಸಾಮಾನ್ಯರಿಗೆ ಇದರ ಕುರಿತು ಯಾವುದೇ ತಿಳವಳಿಕೆಗಳನ್ನೇ ನೀಡಿಲ್ಲ~ ಎಂದು ಹೇಳಿದರು.

`ರಸ್ತೆಗಳನ್ನು ವಿಸ್ತರಿಸುವ ಪ್ರಸ್ತಾವನೆಯು ನಗರದ ಒಳಗಿನ 91 ರಸ್ತೆಗಳನ್ನು ಗುರುತಿಸುವ ಮೂಲಕ 2004 ರಲ್ಲಿ ಮುಂದಿಡಲಾಯಿತು. ಈಗ ಪ್ರಸ್ತುತ ಅದು 216 ಕ್ಕೆ ಬೆಳೆದಿದೆ. ಈ ಮೂಲಕ ಸಮುದಾಯಗಳ ಬೃಹತ್ ಸ್ಥಳಾಂತರ ಹಾಗೂ ನಗರದ ಮೂಲ ಭಾಗಗಳ ಅನಿಯೋಜಿತ ಮರುವಿನ್ಯಾಸವು ಆಗಲಿದೆ. ಈ ಯೋಜನೆಗಳಿಂದ ಸಾವಿರಾರು ವ್ಯಾಪಾರಗಳು, ಮನೆಗಳು, ರಸ್ತೆ ವ್ಯಾಪಾರದ ಸ್ಥಳಗಳು, ಮರಗಳು ಹಾಗೂ ಮುಖ್ಯವಾಗಿ ಪಾದಚಾರಿಗಳು, ಸೈಕಲ್ ಸವಾರರ ಮೇಲೆ ಪ್ರಭಾವ ಬೀರಲಿವೆ~ ಎಂದು ವಿವರಿಸಿದರು.

`ರಸ್ತೆ ವಿಸ್ತರಣೆಯೇ ಶಾಶ್ವತವಾದ ಪರಿಹಾರವಲ್ಲ, ಇದು ಅಲ್ಪಾವಧಿಯ ಪರಿಹಾರ ಮಾತ್ರವಾಗಿದೆ. ಇದರ ಬದಲು ಶಾಶ್ವತ ಪರಿಹಾರಗಳ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆ ಇದೆ. ಖಾಸಗಿ ವಾಹನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು. ಕಾಲ್ನಡಿಗೆ ಹಾಗೂ ಮೋಟಾರ್ ರಹಿತ ಸಂಚಾರಕ್ಕೆ ಉತ್ತೇಜನವನ್ನು ನೀಡಬೇಕು. ಸಾರ್ವಜನಿಕ ಸಂಚಾರವನ್ನು ಬಳಸುವತ್ತ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಬೇಕು~ ಎಂದು ಸಲಹೆ ನೀಡಿದರು.

`ರಸ್ತೆ ವಿಸ್ತರಣೆಯಿಂದ ಹಲವಾರು ಬೀದಿ ಬದಿಯ ವ್ಯಾಪಾರಿಗಳು ಬೀದಿ ಪಾಲಾಗುತ್ತಿದ್ದಾರೆ. ಅವರಿಗೂ ಬದುಕುವ ಹಕ್ಕಿದೆ. ಇಂತಹ ಅಲ್ಪಾವಧಿ ಯೋಜನೆಗಳನ್ನು ಕೈಗೊಳ್ಳುವ ಬದಲು ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು~ ಎಂದರು.

ಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ನಿವಾಸಿಗಳ ಕಲ್ಯಾಣ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಎ.ವಿದ್ಯಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.