ADVERTISEMENT

ಸಂಚಾರ ನಿಯಮ ಉಲ್ಲಂಘನೆ ಮೇಲೆ ಹದ್ದಿನಕಣ್ಣು:ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಡುವ ಸಲುವಾಗಿ ಎರಡನೇ ದರ್ಜೆಯ ನಗರಗಳು ಮತ್ತು ಪ್ರಮುಖ ಆರು ಜಿಲ್ಲೆಗಳಲ್ಲಿ ಇದೇ ಜೂನ್ ತಿಂಗಳೊಳಗೆ ಸರ್ವೈಲೆನ್ಸ್ ಕ್ಯಾಮೆರಾ ಅಳವಡಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳೊಳಗೆ ಬಳ್ಳಾರಿ, ಬೆಳಗಾವಿ, ಗುಲ್ಬರ್ಗಾ ನಗರದ 45 ಕಡೆಗಳಲ್ಲಿ ಪ್ಯಾನ್ ಟಿಲ್ಟ್ ಝೂಮ್(ಪಿಟಿಜೆಡ್)  ಸರ್ವೈಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಮಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಕಳೆದ ವರ್ಷವೇ ಈ ಕ್ಯಾಮೆರಾಗಳನ್ನು ಅಳವಾಡಿಸಲಾಗಿದೆ.

ಈ ರೀತಿ ಹಲವು ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ಹಾಗೂ ಅಪರಾಧ ಕೃತ್ಯ ಮಾಡುವ ಆರೋಪಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಬಿದರಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬ್ಲಾಕ್ ಬೆರಿ ಉಪಕರಣದ ಬಳಕೆ ಯಶಸ್ವಿಯಾಗಿದ್ದು, ಇದನ್ನು ರಾಜ್ಯಾದ್ಯಂತ ಜಾರಿಗೆ ತರಲಾಗುವುದು. ಇದೊಂದು ಪೇಪರ್ ರಹಿತ ಉಪಕರಣವಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಅನುಕೂಲವಾಗಲಿದೆ. ಈ ರೀತಿ ಪೇಪರ್‌ರಹಿತ ಉಪಕರಣವನ್ನು ಬಳಸುತ್ತಿರುವ ಮೊದಲ ರಾಜ್ಯ ನಮ್ಮದು.

ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಪಾರದರ್ಶಕವಾಗಿ ದಂಡ ವಿಧಿಸಬಹುದು ಹಾಗೂ ಪೊಲೀಸ್ ಇಲಾಖೆಯಲ್ಲಿ ಆದಾಯ ಸೋರಿಕೆಯಾಗುವುದಿಲ್ಲ. ಮೇ ತಿಂಗಳೊಳಗೆ ಈ ಉಪಕರಣ ರಾಜ್ಯಾದ್ಯಂತ ಎಲ್ಲಾ ಸಂಚಾರ ಪೊಲೀಸರು ಬಳಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಹೊರ ವಲಯದ ರಸ್ತೆಗಳಲ್ಲಿ 30 ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗುವುದು ಹಾಗೂ ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳ ವಾರ್ಷಿಕ ನಿರ್ವಹಣೆಯನ್ನು ಗುತ್ತಿಗೆ ಮೂಲಕ ಖಾಸಗಿಯವರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.