ADVERTISEMENT

ಸಂತೋಷ್‌ಗೆ ನೋಟಿಸ್‌ ಜಾರಿ

ಎನ್‌.ಎಸ್‌.ವಿನಯ್ ಅಪಹರಣ ಯತ್ನದ ಆರೋಪಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:33 IST
Last Updated 6 ಏಪ್ರಿಲ್ 2018, 19:33 IST

ಬೆಂಗಳೂರು: ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ಎನ್‌.ಎಸ್‌.ವಿನಯ್ ಅಪಹರಣ ಯತ್ನದ ಆರೋಪಿ ಎನ್‌.ಆರ್.ಸಂತೋಷ್‌ಗೆ ಅಧೀನ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸಬೇಕು’ ಎಂದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿ ಸಂತೋಷ್‌ಗೆ ನೋಟಿಸ್‌ ಜಾರಿಗೆ ಆದೇಶಿಸಿದೆ.

ಸರ್ಕಾರದ ಪರ ವಕೀಲರು, ‘ಪ್ರತಿವಾದಿ ಆರೋಪಿ ಪ್ರಕರಣ ನಡೆದ ವೇಳೆ ಉಪಯೋಗಿಸಿದ್ದ ಮೊಬೈಲ್‌ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಅಧೀನ ನ್ಯಾಯಾಲಯ ವಿಧಿಸಿರುವ ಜಾಮೀನು ನೀಡಿಕೆಯ ಷರತ್ತು ಉಲ್ಲಂಘಿಸಿದ್ದಾರೆ. ಹೀಗಾಗಿ ಜಾಮೀನು ರದ್ದುಗೊಳಿಸಬೇಕು’ ಎಂದು ಕೋರಿದರು. ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ಪೀಠ ವಿಚಾರಣೆ ಮುಂದೂಡಿದೆ. ಸಂತೋಷ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪನವರ ಆಪ್ತ ಸಹಾಯಕರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.