ADVERTISEMENT

ಸಂಶೋಧನೆಗಳ ಲಾಭ ರೈತರಿಗೆ ತಲುಪಲಿ- ಸಲಹೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:53 IST
Last Updated 21 ಏಪ್ರಿಲ್ 2013, 19:53 IST

ಯಲಹಂಕ: `ಪಶುವೈದ್ಯಕೀಯ ವಿಜ್ಞಾನದ ಕ್ಷೇತ್ರದ ಸಂಶೋಧನೆಗಳು ಪ್ರಯೋಗಶಾಲೆಗಳಿಗೆ ಸೀಮಿತವಾಗಿರದೆ ಅದನ್ನು ರೈತರ ಮನೆಬಾಗಿಲಿಗೆ ತಲುಪಿಸಿ, ಪ್ರಯೋಜನ ಪಡೆಯುವಂತೆ ಪ್ರೇರೇಪಿಸಬೇಕು' ಎಂದು ಬೀದರಿನ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಆರ್.ಎನ್.ಶ್ರೀನಿವಾಸಗೌಡ ಸಲಹೆ ನೀಡಿದರು.

ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 13ನೇ ಭಾರತೀಯ ಪಶುವೈದ್ಯಕೀಯ ಕಾಂಗ್ರೆಸ್ ಮತ್ತು 20ನೇ ವಾರ್ಷಿಕ ಘಟಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮ್ಮೇಳನದಲ್ಲಿ ವಿಶೇಷವಾಗಿ ಪಶುಗಳ ರೋಗನಿರ್ಣಯ ಮಾಡುವ ಮತ್ತು ಹೊಸ ರೋಗಗಳು ಬರುವುದನ್ನು ಕಂಡುಹಿಡಿಯುವವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭವಿಷ್ಯದಲ್ಲಿ ನಡೆಯುವ ಕಾರ್ಯಾಗಾರಗಳಲ್ಲಿ ಪಶು ಆಹಾರಶಾಸ್ತ್ರ, ಪಶು ಶಾರೀರಿಕ ಮತ್ತು ಅಂಗಾಂಗ ಶಾಸ್ತ್ರ ವಿಭಾಗಗಳಲ್ಲಿ ಅಧ್ಯಯನ ಮಾಡಿರುವವರನ್ನು ಆಹ್ವಾನಿಸಿದರೆ ಚರ್ಚೆ ನಡೆಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದರು.

ಬೀದರ್ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಚ್.ಎಂ.ಜಯಪ್ರಕಾಶ್ ಮಾತನಾಡಿ,  ಇಂತಹ ಕಾರ್ಯಾಗಾರವು ರಾಜ್ಯದ ರೈತರಿಗೆ ಮತ್ತು ಪಶುಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಮಾಹಿತಿ ಒದಗಿಸಲು ಹೆಚ್ಚಿನ ನೆರವು ನೀಡಲಿದೆ. ಮುಂದಿನ ವರ್ಷಗಳಲ್ಲಿಯೂ ಇಂತಹ ಕಾರ್ಯಾಗಾರ ಆಯೋಜಿಸಲು ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮೂವರು ವಿಜ್ಞಾನಿಗಳಿಗೆ `ಯುವ ವಿಜ್ಞಾನಿ' ಪ್ರಶಸ್ತಿ ಹಾಗೂ ನಾಲ್ವರು ವಿಜ್ಞಾನಿಗಳಿಗೆ ಪೋಸ್ಟರ್ ಪ್ರೆಸೆಂಟೇಶನ್ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನರಾದ ಡಾ.ಎಸ್.ಯತಿರಾಜ್, ಭಾರತೀಯ ಪಶುವೈದ್ಯಕೀಯ ಸಂಶೋ ಧನಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎನ್.ಸಿಂಗ್, ಸಮ್ಮೇಳನದ ಅಧ್ಯಕ್ಷ ಡಾ.ಎಂ.ಡಿ.ವೆಂಕಟೇಶ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಎಂ.ಬೈರೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.