ADVERTISEMENT

ಸಂಸ್ಕೃತದಿಂದ ಕನ್ನಡಕ್ಕೆ ಶಕ್ತಿ: ಜಿ.ವಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಬೆಂಗಳೂರು: `ಕನ್ನಡ ಭಾಷೆಯ ಅಂತರಂಗದ ಸತ್ವ ಬೆಳೆಯಬೇಕಾದರೆ ಸಂಸ್ಕೃತದ ಶಾಸ್ತ್ರ-ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಕ್ಕೆ ಅನುವಾದಗೊಳ್ಳಬೇಕು~ ಎಂದು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.

ಸಂಸ್ಕೃತ ವಿಶ್ವವಿದ್ಯಾಲಯ ರಾಜಭವನದಲ್ಲಿ ಶನಿವಾರ ಆಯೋಜಿಸಿದ್ದ `ಸಂಸ್ಕೃತ ಗ್ರಂಥ ಪುರಸ್ಕಾರ ಪ್ರದಾನ ಸಮಾರಂಭ~ದಲ್ಲಿ ಮಾತನಾಡಿದ ಅವರು, `ಸಂಸ್ಕೃತದ ಬೆಳವಣಿಗೆಯಾದಂತೆ ಕನ್ನಡವೂ ಬೆಳೆಯುತ್ತದೆ~ ಎಂದು ಹೇಳಿದರು.

ಕನ್ನಡಿಗರು ಹಿಂದಿನಿಂದಲೂ ಸಂಸ್ಕೃತವನ್ನು ಪ್ರೀತಿಸುತ್ತ ಬಂದಿದ್ದಾರೆ. ಮೈಸೂರು ಅರಸರ ಕಾಲದಲ್ಲೂ ಸಂಸ್ಕೃತಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿತ್ತು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತ ಬಂದ ನಂತರ ಸಂಸ್ಕೃತಕ್ಕೆ ಸಿಗಬೇಕಾದಷ್ಟು ಗೌರವ ದೊರೆಯಲಿಲ್ಲ ಎಂದು ವಿಷಾದಿಸಿದರು.

`ಸಂಸ್ಕೃತದಲ್ಲಿರುವ ಶಾಸ್ತ್ರ-ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದು ವಿ.ವಿ. ಆಡಳಿತ ವರ್ಗಕ್ಕೆ ಹೇಳಿದ್ದೇನೆ. ಅಂತೆಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳ ಸಂಸ್ಕೃತ ವಿದ್ವಾಂಸರ ಕೃತಿಗಳನ್ನು ಹುಡುಕಿ ಪ್ರಕಟಿಸುವ ಕೆಲಸವನ್ನೂ ವಿ.ವಿ. ಮಾಡಬೇಕು~ ಎಂದು ಸೂಚಿಸಿದರು.

ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮಾತನಾಡಿ, `ಸಂಸ್ಕೃತದ ಜ್ಞಾನ ಪರಿಪೂರ್ಣವಾಗಿದ್ದರೆ ನಮ್ಮ ಇತಿಹಾಸ ಪ್ರಜ್ಞೆಯೂ ಉತ್ತಮವಾಗಿರುತ್ತಿತ್ತು. ಋಷಿ-ಮುನಿಗಳ ಕಾಲದ ಸ್ಪಷ್ಟ ಇತಿಹಾಸ ಲಭ್ಯವಿಲ್ಲದಿರಲು ನಾವು ಸಂಸ್ಕೃತದಿಂದ ವಿಮುಖರಾಗಿದ್ದೂ ಒಂದು ಕಾರಣ~ ಎಂದು ವಿಶ್ಲೇಷಿಸಿದರು.

`ಪ್ರಾಂತೀಯತೆ, ಭಾಷೆಯ ಹೆಸರಿನಲ್ಲಿ ಮೂಡುವ ದ್ವೇಷ ಭಾವನೆ ದೇಶದ ಅಖಂಡತೆಗೆ ಅಪಾಯ ತರುತ್ತದೆ~ ಎಂದು ಎಚ್ಚರಿಸಿದರು. `ಹಿಂದೂ ಎಂಬುದು ಜೀವನ ಪದ್ಧತಿ, ವೇದಗಳಲ್ಲಿ ಇದನ್ನೇ ಹೇಳಲಾಗಿದೆ.

ಸಂಸ್ಕೃತವನ್ನು ಇನ್ನಷ್ಟು ಸರಳಗೊಳಿಸಬೇಕು. ಜನಸಾಮಾನ್ಯರಿಗೆ ಸಂಸ್ಕೃತ ಅರ್ಥವಾಗುವಂತೆ ಆಗಬೇಕು. ಆ ಮೂಲಕ ಅವರು ವೇದಗಳ ಅಧ್ಯಯನದಲ್ಲಿ ತೊಡಗುವಂತೆ ಆಗಬೇಕು~ ಎಂದರು.

ಸಂಸ್ಕೃತ ವಿ.ವಿ. ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, `ಕನ್ನಡದಲ್ಲಿ ವಿದ್ವತ್ ಪರಂಪರೆ ಕಡಿಮೆಯಾಗುತ್ತಿದೆ ಎಂದು ಹಿಂದೆ ಡಿ.ವಿ. ಗುಂಡಪ್ಪ ಆತಂಕ ವ್ಯಕ್ತಪಡಿಸಿದ್ದರು. ಆದರೆ ಕನ್ನಡದ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಸಂಸ್ಕೃತದಲ್ಲಿ ವಿದ್ವತ್ ಪರಂಪರೆ ಬೆಳೆಯುತ್ತಿದೆ~ ಎಂದು ಹೇಳಿದರು.

  ಮುಂದಿನ ಸಾಲಿನಿಂದ `ಸಂಸ್ಕೃತ ಗ್ರಂಥ ಪುರಸ್ಕಾರ~ವನ್ನು `ಪ್ರೊ.ಎಂ. ಹಿರಿಯಣ್ಣ ಸಂಸ್ಕೃತ ಗ್ರಂಥ ಪುರಸ್ಕಾರ~ ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿದರು. ಸಂಸ್ಕೃತದಲ್ಲಿ ವಿವಿಧ ಗ್ರಂಥಗಳನ್ನು ರಚಿಸಿರುವ ವಿದ್ವಾಂಸರಾದ ಪ್ರೊ.ಎನ್. ರಂಗನಾಥ ಶರ್ಮ, ಡಾ.ಎಚ್.ವಿ. ನಾಗರಾಜ ರಾವ್, ಡಾ.ಎಚ್.ಆರ್. ವಿಶ್ವಾಸ, ಡಾ. ಮಧುಸೂದನ ಅಡಿಗ, ಡಾ. ರೂಪಾ, ಎಸ್. ವೆಂಕಟೇಶ ಅವರಿಗೆ ಸಂಸ್ಕೃತ ಗ್ರಂಥ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಸ್ಕೃತ ವಿ.ವಿ. ಕುಲಸಚಿವ ಪ್ರೊ.ವೈ.ಎಸ್. ಸಿದ್ದೇಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.