ADVERTISEMENT

ಸಂಸ್ಥೆಯ ಕೇಂದ್ರಗಳಿಗೆ ವಿಶೇಷ ಅನುದಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 18:55 IST
Last Updated 8 ಜನವರಿ 2012, 18:55 IST

ಬೆಂಗಳೂರು:  `ವಿಶ್ವದಾದ್ಯಂತ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗುವ ಮೂಲಕ ಜಗತ್ತಿನ ಶಾಂತಿಗಾಗಿ ದುಡಿಯುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಮಾನವ ಪರವಾದದ್ದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ನಗರದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಪ್ರಸ್ತುತ ದಿನಗಳಲ್ಲಿ ಜಗತ್ತು ಕಿರಿದಾಗುತ್ತಿರುವಂತೆಯೇ ಮನುಷ್ಯನ ಮನಸ್ಸೂ ಕಿರಿದಾಗುತ್ತಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸಗಳು ದೂರಾಗುತ್ತಿವೆ. ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮನುಷ್ಯನ ನೆಮ್ಮದಿ, ಶಾಂತಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆ.

ಆರಂಭದ ದಿನಗಳಿಂದ ಇಲ್ಲಿಯವರೆಗೂ ಮನುಷ್ಯನ ಮಾನಸಿಕ ಶಾಂತಿಗಾಗಿ ಸಂಸ್ಥೆ ಶ್ರಮಿಸುತ್ತಲೇ ಬಂದಿದೆ. `ಒಬ್ಬನೇ ದೇವರು, ಒಂದೇ ವಿಶ್ವ ಕುಟುಂಬ~ ಎಂಬ ಘೋಷವಾಕ್ಯದೊಂದಿಗೆ ಸಮ್ಮೇಳನ ನಡೆಸುತ್ತಿರುವುದು ಹೆಚ್ಚು ಸೂಕ್ತವಾಗಿದೆ. ಸಂಸ್ಥೆಯ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರ ವಿಶೇಷ ಅನುದಾನಗಳನ್ನು ನೀಡಲು ಸಿದ್ಧವಿದೆ~ ಎಂದು ಅವರು ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹೆಚ್ಚುವರಿ ಮುಖ್ಯಸ್ಥರಾದ ಹೃದಯ ಮೋಹಿನಿ ಮಾತನಾಡಿ, `ಸಮಾಜದಲ್ಲಿ ಇಂದು ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಅತಿಯಾಸೆಯ ಕಾರಣದಿಂದ ಮನುಷ್ಯ ತಪ್ಪು ದಾರಿ ಹಿಡಿಯುತ್ತಿದ್ದಾನೆ. ಮನುಷ್ಯ ಎಷ್ಟೇ ಸಂಪತ್ತನ್ನು ಗಳಿಸಿದರೂ ಹೊಟ್ಟೆಗೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ತಿನ್ನಲು ಸಾಧ್ಯ. ಮನುಷ್ಯ ಲೌಕಿಕ ಜಗತ್ತಿನ ಬಗ್ಗೆ ತಿಣುಕಾಡುತ್ತಾ ಆತ್ಮೋನ್ನತಿಯನ್ನು ಮರೆಯುತ್ತಾನೆ. ಅಂತಿಮವಾಗಿ ಮಾನಸಿಕ ಶಾಂತಿಗಾಗಿ ಮನುಷ್ಯ ಧ್ಯಾನದ ಮೊರೆ ಹೋಗಲೇ ಬೇಕು~ ಎಂದರು.

ಸಮಾರಂಭದಲ್ಲಿ ಸಿಕಂದರಾಬಾದ್‌ನ ಶ್ರೀ ರಾಮ ನಾಟ್ಯ ನಿಕೇತನದ ವಿದ್ಯಾರ್ಥಿಗಳು ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು. ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ, ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಈಶ್ವರಯ್ಯ, ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಸಂಸ್ಥೆಯ ಬೆಂಗಳೂರು ವಿಭಾಗದ ಮೇಲ್ವಿಚಾರಕಿ ಅಂಬಿಕಾ ಮತ್ತಿತರರು ಪಾಲ್ಗೊಂಡಿದ್ದರು.

`ನಕ್ಸಲ್ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ~
ಸಮಾರಂಭದಲ್ಲಿ ಪಾಲ್ಗೊಂಡು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ, `ರಾಜ್ಯದಲ್ಲಿ ನಕ್ಸಲ್ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಇತ್ತೀಚೆಗೆ ನಡೆದ ನಕ್ಸಲ್ ದಾಳಿಯಲ್ಲಿ ಸಿಕ್ಕಿರುವ ಕರಪತ್ರಗಳು ತಮಿಳು ಭಾಷೆಯಲ್ಲಿವೆ. ಇದನ್ನು ನೋಡಿದರೆ ಅವರು ತಮಿಳುನಾಡಿನಿಂದ ಬಂದಿರುವ ಸಾಧ್ಯತೆಗಳಿವೆ. ರಾಜ್ಯದ ಶಾಂತಿ ಕದಡಲು ಬಾಡಿಗೆ ನಕ್ಸಲರನ್ನು ಕರೆತರಲಾಗುತ್ತಿದೆ. ಈ ಬಗ್ಗೆ ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ~ ಎಂದರು.

`ಮಂಡ್ಯದಲ್ಲಿ ನಡೆದಿರುವ ಹತ್ಯೆ ಮರ್ಯಾದಾ ಹತ್ಯೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಮಾರ್ಯಾದಾ ಹತ್ಯೆ ನಡೆದಿರುವುದು ನಿಜವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.