ADVERTISEMENT

ಸಮಾಧಿ ಸ್ಥಳಾಂತರ ಇಲ್ಲ: ಭಾರತಿ

ಅಭಿಮಾನ್‌ ಸ್ಟುಡಿಯೊದಲ್ಲಿ ವಿಷ್ಣುವರ್ಧನ್‌ 63ನೇ ಜನ್ಮದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:09 IST
Last Updated 18 ಸೆಪ್ಟೆಂಬರ್ 2013, 19:09 IST

ಬೆಂಗಳೂರು: ‘ವಿಷ್ಣುವರ್ಧನ್‌ ಸ್ಮಾರಕ ನಿರ್ಮಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಸಮಾಧಿ ಸ್ಥಳಾಂತರದ ಮಾತೇ ಇಲ್ಲ’ ಎಂದು ಭಾರತಿ ವಿಷ್ಣುವರ್ಧನ್‌ ಹೇಳಿದರು.

ದಿವಂಗತ ನಟ ಡಾ.ವಿಷ್ಣುವರ್ಧನ್‌ ಅವರ 63ನೇ ಜನ್ಮದಿನದ ಅಂಗವಾಗಿ ಕೆಂಗೇರಿ ಸಮೀಪದ ಅಭಿಮಾನ್‌ ಸ್ಟುಡಿಯೊ ಆವರಣದಲ್ಲಿರುವ ವಿಷ್ಣು ಸಮಾಧಿ ಸ್ಥಳದ ಬಳಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ವೇಳೆ ಸರ್ಕಾರ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸದೇ ಇದ್ದರೆ ಸಮಾಧಿ ಸ್ಥಳಾಂತರ ಅನಿ­ವಾರ್ಯ­­ವಾಗಬಹುದು ಎಂದು ಹೇಳಿದ್ದೆ. ಆದರೆ, ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿ­ಸು­­ವು­ದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಸಮಾಧಿ ಸ್ಥಳಾಂತರದ ಚಿಂತನೆ ಕೈಬಿಡಲಾಗಿದೆ’ ಎಂದು ಅವರು ತಿಳಿಸಿದರು.

‘ವಿಷ್ಣುವರ್ಧನ್‌ ಅವರ ಚಿತ್ರಗಳ ಕಾಮಿಕ್ಸ್‌ ಸರಣಿ ಹೊರತರಲು ಸಿದ್ಧತೆ ನಡೆಯುತ್ತಿದೆ. ಈ ಸರಣಿ ಮಕ್ಕಳಿಗೆ ಇಷ್ಟವಾಗುವ ನಂಬಿಕೆ ಇದೆ. ವಿಷ್ಣು­ವರ್ಧನ್‌ ಹಾಕಿಕೊಟ್ಟಿರುವ ಸಮಾಜ­ಸೇವಾ ಕಾರ್ಯಗಳನ್ನು ಮುಂದುವರಿಸಿ­ಕೊಂಡು ಹೋಗಲಾಗು­ತ್ತಿದೆ’ ಎಂದರು.

ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಮಾತನಾಡಿ, ‘ವಿಷ್ಣು­ವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಗಮನ ನೀಡಬೇಕು. ದೇಶ ವಿದೇಶಗಳಿಂದ ನಗರಕ್ಕೆ ಬರುವ ಪ್ರವಾಸಿಗರು ಭೇಟಿ ನೀಡುವಂಥ ಪ್ರವಾಸಿ ಸ್ಥಳವಾಗಿ ಸ್ಮಾರಕ ಅಭಿವೃದ್ಧಿಪಡಿಸಬೇಕು. ವಿಷ್ಣುವರ್ಧನ್‌ ನಟಿಸಿರುವ ಸಿನಿಮಾಗಳ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳ­ವಡಿಸಿ­ಕೊಳ್ಳಬೇಕು’ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ನಾನು ಚಿಕ್ಕಂದಿನಿಂದ ವಿಷ್ಣುವರ್ಧನ್‌ ಸಿನಿಮಾ ನೋಡಿಯೇ ಬೆಳೆದೆ. ಅವರು ನಟಿಸಿದ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳಿವೆ’ ಎಂದು ಹೇಳಿದರು.

ರೋಟರಿ ಸಂಸ್ಥೆ ಹಾಗೂ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ  ಅನೇಕರು ಆರೋಗ್ಯ ತಪಾಸಣೆ ಮಾಡಿಸಿ­ಕೊಂಡರು. ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೋತ್ಥಾನ ಬ್ಲಡ್‌ ಬ್ಯಾಂಕ್‌ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು.

‘ಪ್ರತಿವರ್ಷವೂ ವಿಷ್ಣುವರ್ಧನ್‌ ಜನ್ಮದಿನದಂದು ರಕ್ತದಾನ ಮಾಡು­ತ್ತೇನೆ. ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಶಿಬಿರದಲ್ಲಿ ರಕ್ತದಾನ ಮಾಡಿದ್ದು ಹೆಮ್ಮೆ ಎನಿಸುತ್ತದೆ’ ಎಂದು ತುಮಕೂರಿನಿಂದ ಬಂದಿದ್ದ ಅಭಿಮಾನಿ ಪ್ರಮೋದ್‌ ಹೇಳಿದರು.

ಗುಲಾಬಿ ಹೂಗಳಿಂದ ಅಲಂಕರಿಸಿದ ವಿಷ್ಣು ಸಮಾಧಿಗೆ ಸಾವಿರಾರು ಮಂದಿ ಅಭಿಮಾನಿಗಳು ಹೂಗುಚ್ಛ ಇಟ್ಟು ನಮಿಸಿದರು. ಬೆಳಿಗ್ಗೆಯಿಂದಲೇ ಅಭಿಮಾನ್‌ ಸ್ಟುಡಿಯೊದತ್ತ ಅಭಿಮಾನಿ­ಗಳ ದಂಡು ಹೆಚ್ಚಾಗಿತ್ತು. ವಿಷ್ಣು­ವರ್ಧನ್‌ ಭಾವಚಿತ್ರವಿರುವ ಟಿ ಶರ್ಟ್‌ ಧರಿಸಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.