ADVERTISEMENT

ಸಮೂಹ ಸನ್ನಿಗೆ ಕಾರಣ ನಿಗೂಢ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಬೆಂಗಳೂರು: `ನಗರದಲ್ಲಿ ವಾಸವಿರುವ ಈಶಾನ್ಯ ರಾಜ್ಯಗಳ ಜನರ ರಕ್ಷಣೆಗೆ ನಾವು ಸಿದ್ಧರಿದ್ದೇವೆ~ ಎಂದು ಮುಸ್ಲಿಂ ಸಮುದಾಯದ ಮುಖಂಡರು ಭರವಸೆ ನೀಡಿದರು.

ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆಯ ವದಂತಿ ಹಾಗೂ ವಲಸೆ ವಿಚಾರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಈ ಅಭಯ ನೀಡಿದರು.

`ಮುಂಬೈ ಮತ್ತು ಅಸ್ಸಾಂನಲ್ಲಿ ನಡೆದ ಹಿಂಸಾಚಾರವನ್ನು ದುರುಪಯೋಗಪಡಿಸಿಕೊಂಡಿರುವ ಕೆಲ ದುಷ್ಕರ್ಮಿಗಳು ಈ ರೀತಿ ಸಂದೇಶ ರವಾನಿಸಿ ಭಯ ಹುಟ್ಟಿಸಿದ್ದಾರೆ. ಅದಕ್ಕೆ ಕಿವಿಗೊಡಬೇಕಾದ ಅಗತ್ಯವಿಲ್ಲ.
 
ಮುಸ್ಲಿಂ ಸಮುದಾಯದ ವ್ಯಕ್ತಿಯಿಂದ ಆ ಸಂದೇಶ ರವಾನೆಯಾಗಿಲ್ಲ. ಒಂದು ವೇಳೆ ನಮ್ಮ ಸಮುದಾಯದ ವ್ಯಕ್ತಿಯಿಂದಲೇ ಈ ರೀತಿಯಾಗಿದ್ದರೆ ಆತನನ್ನು ಬಂಧಿಸಿದ 24 ಗಂಟೆಯೊಳಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ. ಈ ಬಗ್ಗೆ ಯಾವುದೇ ಅನುಕಂಪಬೇಡ~ ಎಂದು ಅವರು ಹೇಳಿದರು.

`ಯಾವುದೋ ಒಂದು ಸಂದೇಶದಿಂದ ನೀವು ಭಯಪಡಬೇಕಾಗಿಲ್ಲ. ನಗರದಲ್ಲಿ ಹದಿನೈದು ಲಕ್ಷ ಮುಸ್ಲಿಂ ಜನರು ನಿಮ್ಮ ರಕ್ಷಣೆಗಿದ್ದಾರೆ. ಅಲ್ಲದೇ, ಪೊಲೀಸರು ಕೂಡ ನಿಮಗೆ ಭದ್ರತೆ ಒದಗಿಸುತ್ತಿದ್ದಾರೆ. ಶುಕ್ರವಾರ ನಮ್ಮ ಸಮುದಾಯದ ಪ್ರಾರ್ಥನೆ ನಡೆಯಲಿದ್ದು, ಆಗ ಸಹ ನಿಮಗೆ ರಕ್ಷಣೆ ನೀಡುವ ಬಗ್ಗೆ ಚರ್ಚಿಸಲಿದ್ದೇವೆ.
 
ರಾಜ್ಯದಲ್ಲಿ ಮುಕ್ತವಾಗಿ ಬದುಕುವ ಹಕ್ಕು ನಿಮಗೂ ಇದೆ. ನಮ್ಮ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಶೀಘ್ರವೇ ವದಂತಿ ಹಬ್ಬಿಸಿದ ಕಿಡಿಗೇಡಿಗಳನ್ನು ಬಂಧಿಸಲಿದ್ದಾರೆ~ ಎಂದು ಶಾಸಕ ರೋಷನ್ ಬೇಗ್ ಈಶಾನ್ಯ ರಾಜ್ಯಗಳ ಜನರಿಗೆ ಭರವಸೆ ನೀಡಿದರು.

ನಂತರ ಮಾತನಾಡಿದ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಹ್ಯಾರಿಸ್, `ಬುಧವಾರ ರಾತ್ರಿ ಆರು ಸಾವಿರ ಜನ ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಕರ್ನಾಟಕ ಆತಿಥ್ಯಕ್ಕೆ ಹೆಸರಾದ ರಾಜ್ಯವಾಗಿದ್ದು, ಯಾವುದೇ ರಾಜ್ಯದ ಜನ ಇಲ್ಲಿ ನಿರ್ಭಯವಾಗಿ ಬದುಕು ನಡೆಸಬಹುದು~ ಎಂದರು.

`ವದಂತಿಯಿಂದ ಈಶಾನ್ಯ ರಾಜ್ಯಗಳ ಜನ ಭಯಬೀತರಾಗಿರುವುದರಿಂದ ಅವರಿಗೆ ಧೈರ್ಯ ತುಂಬುವ ಸಲುವಾಗಿ ಈ ಸಭೆ ನಡೆಸಲಾಯಿತು. ಅವರಲ್ಲಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಂ ಸಮುದಾಯದವರೂ ಇದ್ದಾರೆ. ಸಹೋದರರ ನಡುವೆ ಇಂತಹ ವೈಷಮ್ಯ ನಡೆಯಲು ಸಾಧ್ಯವಿಲ್ಲ. ನಾವೆಲ್ಲಾ ಭಾರತೀಯರಾಗಿದ್ದು ಅಂತಹ ಪರಿಸ್ಥಿತಿ ನಿರ್ಮಾಣವಾಗಲು ನಾವು ಬಿಡುವುದಿಲ್ಲ~ ಎಂದು ಶಾಸಕ ಹ್ಯಾರಿಸ್ ಸುದ್ದಿಗಾರರಿಗೆ ತಿಳಿಸಿದರು.

`ಯಾವುದೇ ದೂರು ಬಂದಿಲ್ಲ
`ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಇದುವರೆಗೂ ಒಂದು ದೂರು ಕೂಡ ಬಂದಿಲ್ಲ~ ಎಂದು ಎಂದು ಪ್ರಕರಣದ ನೋಡಲ್ ಅಧಿಕಾರಿಯಾಗಿರುವ ಗುಪ್ತಚರದಳದ ಡಿಸಿಪಿ ಡಿಸೋಜಾ ಹೇಳಿದ್ದಾರೆ.
ಗುರುವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ವದಂತಿಯ ಸತ್ಯಾಸತ್ಯದ ಬಗ್ಗೆ ವಿಚಾರಿಸಲು ಇದುವರೆಗೆ ಸಾವಿರಕ್ಕೂ ಹೆಚ್ಚು ದೂರವಾಣಿ ಕರೆಗಳು ಬಂದಿವೆ.

ಆದರೆ, ಹಲ್ಲೆ ನಡೆದಿರುವ ಬಗ್ಗೆ ಒಂದು ದೂರು ಬಂದಿಲ್ಲ. ನಗರವೂ ಸೇರಿದಂತೆ ಹಾಸನ, ಹುಬ್ಬಳ್ಳಿ, ಉಡುಪಿ ಹಾಗೂ ಟಿಬೇಟನ್ ಕಾಲೋನಿಗಳಿಂದ ಕರೆಗಳು ಬರುತ್ತಿವೆ. ಅಸ್ಸಾಂ, ಮಣಿಪುರ, ದೆಹಲಿ ಮತ್ತು ದೇಶದ ಇತರೆ ಕಡೆಗಳ ಜನರೂ ಕರೆಮಾಡಿ ವದಂತಿಯ ಬಗ್ಗೆ ಮಾತ್ರ ವಿಚಾರಿಸುತ್ತಿದ್ದಾರೆ. ಹೀಗಾಗಿ ಜನರು ವದಂತಿಗಳಿಗೆ ಕಿವಿಗೊಡಬಾರದು~ ಎಂದು ಅವರು ತಿಳಿಸಿದರು.

`ನಗರ ಹಾಗೂ ರಾಜ್ಯದ ಶಾಂತಿ ಕದಡಲು ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಕಿಡಿಗೇಡಿಗಳು ಮುಂಬೈನಲ್ಲಿ ನಡೆದ ಹಲ್ಲೆಯ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ರಾಜ್ಯದಲ್ಲಿ ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆಯುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು~ ಎಂದು ಅವರು ಹೇಳಿದರು.

ಸಂದೇಶ ಪತ್ತೆ ಕಾರ್ಯ ಚುರುಕು
`ನಗರದಲ್ಲಿ 2.40ಲಕ್ಷದಷ್ಟು ಈಶಾನ್ಯ ರಾಜ್ಯಗಳ ಜನ ವಾಸವಾಗಿದ್ದಾರೆ. ವದಂತಿ ಹಿನ್ನೆಲೆಯಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ತಮ್ಮ ರಾಜ್ಯಗಳಿಗೆ ಹಿಂತಿರುಗಿದ್ದು, ಕಳೆದ ರಾತ್ರಿ ಆರು ಸಾವಿರ ಜನ ನಗರ ತೊರೆದಿದ್ದಾರೆ.~ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್ `ಪ್ರಜಾವಾಣಿ~ಗೆ ತಿಳಿಸಿದರು.

`ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಸುಳ್ಳು ಸಂದೇಶ ರಾರಾಜಿಸುತ್ತಿರುವುದರಿಂದ ಜನ ಆಘಾತಕ್ಕೊಳಗಾಗಿದ್ದಾರೆ. ಆ ಸಂದೇಶದ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ~ ಎಂದು ಹೇಳಿದರು.

ಎಸ್‌ಎಂಎಸ್ ಸಂದೇಶದಲ್ಲಿ ಏನಿದೆ?
* `ಈಶಾನ್ಯ ರಾಜ್ಯಗಳ ನಿವಾಸಿಗಳು ಬೆಂಗಳೂರಿನಲ್ಲಿರುವ ನಿಮ್ಮ ಮಕ್ಕಳು, ಸಂಬಂಧಿಕರನ್ನು ಆದಷ್ಟು ಬೇಗ ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳಿ. ಕಳೆದ ರಾತ್ರಿ ಇಬ್ಬರು ನೇಪಾಳದ ಮತ್ತು ಇಬ್ಬರು ಮಣಿಪುರ ಮೂಲದ ಯುವಕರನ್ನು ಮುಸ್ಲಿಂ ಸಮುದಾಯದವರು ಹತ್ಯೆ ಮಾಡಿದ್ದಾರೆ. ಅಲ್ಲದೇ, ಆಗಸ್ಟ್ 20ರ ಮಧ್ಯಾಹ್ನ ಎರಡು ಗಂಟೆಯಿಂದ ಬೆಂಗಳೂರಿನಲ್ಲಿರುವ ಎಲ್ಲಾ ಈಶಾನ್ಯ ರಾಜ್ಯಗಳ ನಿವಾಸಿಗಳ ಮೇಲಿನ ದಾಳಿ ತೀವ್ರಗೊಳ್ಳಲಿದೆ.
 
ಅಸ್ಸಾಂನಲ್ಲಿ ನಡೆದ ಹಿಂಸಾಚಾರದ ಪರಿಣಾಮದಿಂದ ಬೆಂಗಳೂರಿನಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನನ್ನ ಸ್ನೇಹಿತನಿಂದ ನನಗೆ ಸಂದೇಶ ಬಂತು~ ಎಂದು ಅಸ್ಸಾಂ ಮೂಲದ ಟಾಂಗ್ಲಾನ್ ಲೋಟ್ಜೆಮ್ ಕುಕಿ ತಿಳಿಸಿದರು.

`ನಾನು 2004ರಲ್ಲಿ ರಾಜ್ಯಕ್ಕೆ ಬಂದ್ದಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಯುವತಿಯನ್ನು ವಿವಾಹವಾಗಿ ನಗರದಲ್ಲೇ ನೆಲೆಸಿದ್ದೇನೆ. ನನಗೆ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ. ಯಾವುದೇ ಅಪರಿಚಿತ ವ್ಯಕ್ತಿಯಿಂದ ನನಗೆ ಈ ರೀತಿ ಸಂದೇಶ ಬಂದಿಲ್ಲ. ಆದರೆ, ಮೂರ‌್ನಾಲ್ಕು ದಿನಗಳಿಂದ ಫೇಸ್‌ಬುಕ್‌ನಲ್ಲಿ ಈ ರೀತಿ ಸಂದೇಶಗಳು ಕಾಣಿಸುತ್ತಿರುವುದು ಮತ್ತು ಸ್ನೇಹಿತರಿಗೆ ಈ ರೀತಿ ಸಂದೇಶಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ~ ಎಂದು ಅವರು ಹೇಳಿದರು.

* ಬೆಂಗಳೂರು ಸೇರಿದಂತೆ ಪುಣೆ, ಮುಂಬೈ, ಆಂಧ್ರಪ್ರದೇಶದಲ್ಲಿ ಈಶಾನ್ಯ ರಾಜ್ಯದ ಜನರ ಮೇಲೆ ಹಲ್ಲೆ ನಡೆಯುತ್ತಿದೆ. ನಗರದ ನೀಲಸಂದ್ರದಲ್ಲಿ ಮುಸ್ಲಿಂ ಸಮುದಾಯದವರು ಇಬ್ಬರು ಯುವಕರನ್ನು ಕೊಲೆ ಮಾಡಿದ್ದಾರೆ. ಅದರಂತೆ ಆಗಸ್ಟ್ 12ರಂದು ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ ಬಳಿ ಒಬ್ಬ ಯುವಕನ ಹತ್ಯೆಯಾಗಿದೆ ಎಂಬುದು ಮತ್ತೊಂದು ಸಂದೇಶವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.