ADVERTISEMENT

ಸರಕು- ಸೇವೆ ಸಂಗ್ರಹಣೆಯಲ್ಲಿ ದಲಿತರಿಗೆ ಮೀಸಲಾತಿ:ರೂ 1 ಲಕ್ಷದ ಮಿತಿ ತೆಗೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಬೆಂಗಳೂರು: ಸಾರ್ವಜನಿಕ ಸರಕುಗಳು ಹಾಗೂ ಸೇವೆಗಳ ಸಂಗ್ರಹಣೆಯಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿಸಲು ನಿಗದಿಪಡಿಸಿರುವ ಒಂದು ಲಕ್ಷ ರೂಪಾಯಿಗಳ ಮಿತಿಯನ್ನು ತೆಗೆದು ಹಾಕುವಂತೆ ಕರ್ನಾಟಕ ದಲಿತ ಕೈಗಾರಿಕೋದ್ಯಮಿಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

`ದಲಿತರು ಒಂದು ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ಮಿತಿಯನ್ನು ತೆಗೆದು ಹಾಕುವಂತೆ 2005ರಿಂದ ಇದುವರೆಗೆ ಎಲ್ಲ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಒಕ್ಕೂಟದ ಅಧ್ಯಕ್ಷ ಎ.ಸಿ. ಚಿಕ್ಕಣ್ಣ ಪ್ರಕಟಣೆಯಲ್ಲಿ ವಿಷಾದಿಸಿದ್ದಾರೆ.

`ದಲಿತರ ಅಭಿವೃದ್ಧಿಗೆ ಲಾಭದಾಯಕ ಯೋಜನೆ ರೂಪಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ಪರಿಶಿಷ್ಟರ ಬೆಳವಣಿಗೆಗೆ ಹಲವು ಮಾರ್ಗಗಳಿದ್ದರೂ ದಿಕ್ಕು ತಪ್ಪಿಸಲಾಗುತ್ತಿದೆ. ಹೀಗಾಗಿ, ಪ್ರತಿ ಬಾರಿ ಅಂಬೇಡ್ಕರ್ ಜಯಂತಿಯಂದು ಮುಖ್ಯಮಂತ್ರಿಗಳು ಸುಳ್ಳು ಹೇಳುವ ಬದಲು ಆತ್ಮಸಾಕ್ಷಿಗೆ ಅನುಗುಣವಾಗಿ ಸಂಬಂಧಪಟ್ಟವರೊಡನೆ ಚರ್ಚಿಸಿ ದಲಿತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು~ ಎಂದು ಅವರು ಮನವಿ ಮಾಡಿದ್ದಾರೆ.

`ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮಗಳು ಈ ಜನಾಂಗದವರ ಆರ್ಥಿಕ ಅಭಿವೃದ್ಧಿಗೆ ಇದುವರೆಗೆ ಸುಮಾರು 3,500 ಕೋಟಿ ರೂಪಾಯಿ ಖರ್ಚು ಮಾಡಿವೆ. ಅಂದರೆ, ಕೈಗಾರಿಕೆ, ವ್ಯಾಪಾರ ಮತ್ತು ಸೇವೆ ಪ್ರಾರಂಭಿಸುವವರಿಗೆ ಸಾಲ ನೀಡುವುದು. ಆದರೆ, ಕೋಟಿಗಟ್ಟಲೆ ಸಾಲ ನೀಡಿದರೂ ದಲಿತರು ನಡೆಸುವ ಒಂದು ಕೈಗಾರಿಕೆಯೂ ಚಾಲ್ತಿಯಲ್ಲಿಲ್ಲ. ಆದರೂ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರ ಯಾವ ಪುರುಷಾರ್ಥಕ್ಕೆ ಖರ್ಚು ಮಾಡಿದೆ~ ಎಂದು ಅವರು ಪ್ರಶ್ನಿಸಿದ್ದಾರೆ.

`ಸರ್ಕಾರದ ಯೋಜನೆಗಳಲ್ಲಿ ಭೂಮಿ ಖರೀದಿ ಮತ್ತು ಅಲ್ಪಸ್ವಲ್ಪ ನಿವೇಶನ ಹಂಚಿಕೆ ಹೊರತುಪಡಿಸಿದರೆ ಬೇರೆ ಯಾವ ಯೋಜನೆಗಳು ಸಫಲವಾಗಿಲ್ಲ.ಆರ್ಥಿಕ ಅಭಿವೃದ್ಧಿಗೆ ಮಂಜೂರಾಗುವ ಸಾಲದ ಮೊತ್ತ ಫಲಾನುಭವಿಗಳ ಕೈಸೇರುವ ಹೊತ್ತಿಗೆ ನಿಗದಿತ ಮೊತ್ತದಲ್ಲಿ ಶೇ 40ರಷ್ಟು ಅಧಿಕಾರಿಗಳ ಪಾಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.