ADVERTISEMENT

ಸರಗಳ್ಳತನ: 65ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 7:59 IST
Last Updated 14 ಡಿಸೆಂಬರ್ 2012, 7:59 IST

ಬೆಂಗಳೂರು: ಸರಗಳವು ಮತ್ತು ಕನ್ನಕಳವು ಪ್ರಕರಣಗಳನ್ನು ಭೇದಿಸಿರುವ ಪಶ್ಚಿಮ ವಿಭಾಗದ ಪೊಲೀಸರು ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`20 ಸರಗಳವು ಮತ್ತು 25 ಕನ್ನಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 1.83 ಕೆ.ಜಿ ಚಿನ್ನಾಭರಣ ಮತ್ತು ಹದಿಮೂರು ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಲಕ್ಷ್ಮೀಕಾಂತ ಅಲಿಯಾಸ್ ವಿನಯ್ (29) ಮತ್ತು ಬಾಬು ಅಲಿಯಾಸ್ ಚೂಡಿ  (35) ಎಂಬುವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರಾದ ಆರೋಪಿಗಳು, ನಗರದಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದರು. ಕಳವು ಮಾಡಿದ ಸರಗಳನ್ನು ಮಾರಾಟ ಮಾಡಿ, ಆ ಹಣದಲ್ಲಿ ಜೂಜು ಆಡುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ಸರಗಳವು ಮಾಡುತ್ತಿದ್ದರು. ಹೀಗೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲೇ ಒಟ್ಟು 11 ಚಿನ್ನದ ಸರಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ ಕಾಮಾಕ್ಷಿಪಾಳ್ಯ, ಚಂದ್ರಾಲೇಔಟ್, ಬಸವೇಶ್ವರ ನಗರ, ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಯಲಹಂಕ ಉಪನಗರ ಠಾಣೆಯಲ್ಲಿ ಒಂಬತ್ತು ಚಿನ್ನದ ಸರಗಳನ್ನು ದೋಚಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಮಹಿಳೆಯರ ಬಂಧನ: ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರದ ಕಲಾವತಿ (28), ವೆಂಕಟಮ್ಮ (45) ಮತ್ತು ಶಾಂತಮ್ಮ (35) ಬಂಧಿತರು. ಕೆಲ ತಿಂಗಳುಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಹೆಗ್ಡೆ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು.

ಆರೋಪಿಗಳು, ಪ್ರಯಾಣಿಕರ ಸೋಗಿನಲ್ಲಿ ಜನದಟ್ಟಣೆ ಇರುವ ಬಿಎಂಟಿಸಿ ಬಸ್‌ಗಳನ್ನು ಹತ್ತುತ್ತಿದ್ದರು. ಬಳಿಕ ಮಹಿಳೆಯರ ಗಮನ ಬೇರೆಡೆ ಸೆಳೆದು ಹಣ, ಚಿನ್ನದ ಸರಗಳನ್ನು ದೋಚುತ್ತಿದ್ದರು.  ಇತ್ತೀಚೆಗೆ ಕಲಾಸಿಪಾಳ್ಯ ಬಳಿ ಬಸ್‌ನಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡುವಾಗ ಸಿಕ್ಕಿ ಬಿದ್ದಿದ್ದರು. ಅವರ ವಿರುದ್ಧ ಯಲಹಂಕ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು ಐದು ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲಾಸಿಪಾಳ್ಯ ಪೋಲಿಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.