ಬೆಂಗಳೂರು: ‘ಉತ್ತಮ ಆಹಾರ ಶೈಲಿ, ನಿಯಮಿತ ವ್ಯಾಯಾಮ ಮತ್ತು ಸೂಕ್ತ ತಪಾಸಣೆಗೆ ಒಳಗಾಗುವ ಮೂಲಕ ಮೂತ್ರಪಿಂಡ (ಕಿಡ್ನಿ) ವೈಫಲ್ಯದ ಸಮಸ್ಯೆಯಿಂದ ದೂರವಿರಬಹುದು’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಡಾ.ಸುಂದರ್ ಹೇಳಿದರು.
ಒಮೆಗಾ ರಿಹ್ಯಾಬಿಲಿಟೇಷನ್ ಟ್ರಸ್ಟ್ ‘ವಿಶ್ವ ಮೂತ್ರ ಪಿಂಡ ದಿನಾಚರಣೆ’ ಅಂಗವಾಗಿ ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಕ್ತದೊತ್ತಡ, ಮಧುಮೇಹ ಕಾಯಿಲೆ ಇರುವವರು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು. ಊಟದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಬಳಸಬೇಕು. ತಂಬಾಕು ಸೇವನೆಯನ್ನು ಬಿಡಬೇಕು. ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎಂ.ಆನಂದಕುಮಾರ್ ಮಾತನಾಡಿ, ಮೂತ್ರಪಿಂಡ ದಾನದಿಂದ ಇನ್ನೊಬ್ಬರಿಗೆ ಮರುಜನ್ಮ ನೀಡಿದಂತಾಗುತ್ತದಲ್ಲದೆ, ಪ್ರತಿಯೊಬ್ಬರು ಮೂತ್ರಪಿಂಡ ದಾನಕ್ಕೆ ಮುಂದಾಗಬೇಕು ಎಂದರು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ ನೆರವು ನೀಡಲು ಈ ಟ್ರಸ್ಟ್ ಆರಂಭಿಸಲಾಗಿದೆ. ಈವರೆಗೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ 25ಕ್ಕೂ ಹೆಚ್ಚು ರೋಗಿಗಳ ಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಮೂತ್ರಪಿಂಡ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಪುರಭವನದಿಂದ ಕಬ್ಬನ್ ಉದ್ಯಾನದವರೆಗೆ ಟ್ರಸ್ಟ್‌ನ ಸದಸ್ಯರು ಜಾಥಾ ನಡೆಸಿದರು. ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ನಿವೃತ್ತ ಮೇಜರ್ ಜನರಲ್ ಆರ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.