ADVERTISEMENT

ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಬೆಂಗಳೂರು:  ಸಚಿವರಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸಿನ ಮೇಲೆ ಡಿನೋಟಿಫೈ ಮಾಡಿದ್ದ ಜಮೀನನ್ನು, ಅವರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸು ಪಡೆದ ನಂತರ ರದ್ದು ಮಾಡಿರುವ ಮುಖ್ಯಮಂತ್ರಿಗಳ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಎ.ವಿ.ರವಿ ಪ್ರಕಾಶ್ ಹಾಗೂ ಎ.ವಿ.ಶ್ರೀರಾಮನ್ ಎನ್ನುವವರಿಗೆ ಕೆ.ಆರ್.ಪುರ ಹೋಬಳಿಯ ಥಣಿಸಂದ್ರದಲ್ಲಿ ನೀಡಲಾಗಿದ್ದ ಸುಮಾರು ನಾಲ್ಕು ಎಕರೆ ಜಮೀನಿನ ವಿವಾದ ಇದಾಗಿದೆ.

ಅರ್ಕಾವತಿ ಬಡಾವಣೆ ನಿರ್ಮಿಸಲು ಈ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಈ ಜಮೀನಿನಲ್ಲಿ ಅರ್ಜಿದಾರರು ತಮ್ಮ ತಂದೆಯ ಸ್ಮರಣಾರ್ಥ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಇಚ್ಛಿಸಿದ್ದರಿಂದ 2010ರ ಸೆ.25ರಂದು ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು.

ಆದರೆ ಅ.10ರಂದು ಜಾರಕಿಹೊಳಿ ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದ ಕಾರಣ, ಅದೇ 19ರಂದು ಡಿನೋಟಿಫೈ ಆದೇಶವನ್ನು ಸರ್ಕಾರ ರದ್ದು ಮಾಡಿದೆ ಎನ್ನುವುದು ಅರ್ಜಿದಾರರ ಆರೋಪ. ರದ್ದತಿ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಅ.19ರ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿದರು.

ಡಿನೋಟಿಫೈ ಆದೇಶ ಹಿಂದಕ್ಕೆ: ಇನ್ನೊಂದು ಪ್ರಕರಣದಲ್ಲಿ, ಡಿನೋಟಿಫೈಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಎಚ್ಚೆತ್ತುಕೊಂಡ ಸರ್ಕಾರ, ತಾನು ಹೊರಡಿಸಿದ್ದ ಡಿನೋಟಿಫಿಕೇಷನ್ ಆದೇಶವನ್ನು ಹಿಂದಕ್ಕೆ ಪಡೆದಿದೆ.

ನಾಗಶೆಟ್ಟಿಹಳ್ಳಿ ಬಳಿಯ ಸುಮಾರು 15ಸಾವಿರ ಚದರ ಅಡಿ ನಿವೇಶನದ ವಿವಾದ ಇದಾಗಿದ್ದು, ಇದರ ವಿರುದ್ಧ ‘ಆರ್‌ಎಂವಿ. ಎನ್‌ಕ್ಲೇವ್ ನಾಗರಿಕರ ಸಂಘ’ ಅರ್ಜಿ ಸಲ್ಲಿಸಿತ್ತು. ‘ಇದು ಸಾರ್ವಜನಿಕ ಉದ್ದೇಶಕ್ಕೆ ಮೀಸಲು ಇರಿಸಿರುವ ನಿವೇಶನ. ಆದರೆ ಬಿಲ್ಡರ್ ಸೆಲ್ವಕುಮಾರ್ ಎನ್ನುವವರಿಗೆ ಅನುಕೂಲ ಮಾಡಿಕೊಡಲು ಕಳೆದ. ಅ.14ರಂದು ಡಿನೋಟಿಫೈ ಮಾಡಲಾಗಿದೆ’ ಎಂದು ಅರ್ಜಿದಾರರು ದೂರಿದ್ದರು.

ಇದರಿಂದಾಗಿ ಡಿ.27ರಂದು ಆದೇಶವನ್ನು ರದ್ದು ಮಾಡಿದ ಸರ್ಕಾರ, ಅದನ್ನು ಮಂಗಳವಾರ ಕೋರ್ಟ್‌ಗೆ ತಿಳಿಸಿತು. ಈ ನಿವೇಶನವನ್ನು ಉದ್ಯಾನಕ್ಕೆ ಮೀಸಲು ಇಡುವಂತೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.