ADVERTISEMENT

ಸರ್ಕಾರದ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 19:10 IST
Last Updated 19 ಫೆಬ್ರುವರಿ 2011, 19:10 IST

ಬೆಂಗಳೂರು:  ‘ಕರ್ನಾಟಕದಲ್ಲಿ ವಿಮಾನಯಾನ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಬೇಕು’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.ನಗರಲ್ಲಿ ಶನಿವಾರ ಹಿಂದುಸ್ತಾನ್ ಅಕಾಡೆಮಿ ಸಂಸ್ಥೆಯ ಆವರಣದಲ್ಲಿ ರೂ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮ್ಯಾನೇಜ್‌ಮೆಂಟ್ ವಿಭಾಗದ ಕಟ್ಟಡವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

‘ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿರುವ ಅವಕಾಶಗಳಿಗೆ ಆಕಾಶವೇ ಮಿತಿಯಾಗಿದೆ. ಕರ್ನಾಟಕದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ವ್ಯಾಪಕ ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ವಿಮಾನಗಳ ಎಂಜಿನಿಯರ್‌ಗಳು, ತಂತ್ರಜ್ಞರು, ಪೈಲಟ್‌ಗಳು, ಕಮಾಂಡರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗಬೇಕು’ ಎಂದು ಹೇಳಿದರು.

‘ವೈಮಾನಿಕ ಕ್ಷೇತ್ರದಲ್ಲಿ ಭಾರತ ಇನ್ನೂ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದ ಬಳ್ಳಾರಿ ಜಿಲ್ಲೆಯ ಹಂಪಿ ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಿಗೆ ಸಮರ್ಪಕ ವಿಮಾನ ಸೌಕರ್ಯಗಳಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರವಾಸೋದ್ಯಮ ಬೆಳೆಯಲು ಹೇಗೆ ಸಾಧ್ಯ’ ಎಂದರು.

‘ಹುಬ್ಬಳ್ಳಿಗೆ ಖಾಸಗಿ ವಿಮಾನಸೇವೆ ಇದೆಯಾದರೂ ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್ ಸೇವೆ ಆರಂಭವಾಗಬೇಕು. ರಾಜ್ಯಪಾಲನಾದ ನನಗೇ ತುರ್ತು ಸಂದರ್ಭಗಳಲ್ಲಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಬೇಕಾದರೆ ವಿಮಾನ ಸೌಕರ್ಯ ಇಲ್ಲ’ ಎಂದರು.

ನೆನಪಾದ ವಿಮಾನ ದುರಂತ: ‘ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳ ನಿರ್ವಹಣೆ ತೃಪ್ತಿಕರವಾಗಿಲ್ಲ. ನಮ್ಮ ದೇಶದ ವಿಮಾನ ನಿಲ್ದಾಣಗಳು, ಹವಾಮಾನದ ಬಗ್ಗೆ ತಿಳಿವಳಿಕೆಯಿರುವ ಪೈಲಟ್‌ಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದಲೇ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ ದುರಂತಕ್ಕೀಡಾಯಿತು’ ಎಂದು ಅವರು ಸ್ಮರಿಸಿದರು.

ಬೋಯಿಂಗ್, ಏರ್‌ಬಸ್‌ನಂಥ ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿವೆ, ಅವುಗಳಿಗೆ ತಕ್ಕಂತೆ ವಿಮಾನ ತಂತ್ರಜ್ಞಾನದ ಬಗ್ಗೆ ಶಿಕ್ಷಣ ನೀಡುವ ಸಂಸ್ಥೆಗಳನ್ನು ಸ್ಥಾಪಿಸಬೇಕು. ಅಲ್ಲದೇ ರಾಜ್ಯಕ್ಕೊಂದರಂತೆ ‘ಫ್ಲೈಯಿಂಗ್ ಕ್ಲಬ್’ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಿಂದುಸ್ತಾನ್ ಅಕಾಡೆಮಿ ಅಧ್ಯಕ್ಷ ಕೆ.ಸಿ.ಸ್ಯಾಮುಯಲ್ ಮಾತನಾಡಿ, ‘ಬಾಹ್ಯಾಕಾಶ ಎಂಜಿನಿಯರಿಂಗ್ ಶಿಕ್ಷಣ ನೀಡಲು ಅಕಾಡೆಮಿ ವತಿಯಿಂದ ಈಗಾಗಲೇ ಹೊಸಕೋಟೆ ಬಳಿ 25 ಎಕರೆ ವಿಸ್ತಾರದಲ್ಲಿ ಮೂರು ವಿಭಾಗಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಸಿವಿಲ್ ಏವಿಯೇಷನ್ ಡಿಪ್ಲೊಮಾದಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ವಿಭಾಗಗಳ ಸಂಖ್ಯೆಯನ್ನ ಹೆಚ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.