ರಾಜರಾಜೇಶ್ವರಿನಗರ: ಉತ್ತರಹಳ್ಳಿ ಸಮೀಪದ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕ ಸೌಲಭ್ಯಕ್ಕಾಗಿ (ಸಿ.ಎ.) ಮೀಸಲಿಟ್ಟಿದ್ದ ಜಾಗದಲ್ಲಿ ಕೆಲವರು ಮಾಡಿಕೊಂಡಿದ್ದ ಒತ್ತುವರಿಯನ್ನು ಪ್ರಾಧಿಕಾರವು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.
35 ಗುಂಟೆ ವಿಸ್ತೀರ್ಣದ ಸಿ.ಎ. ನಿವೇಶನದಲ್ಲಿ ಕೆಲವರು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆ ಮತ್ತು ಅಂಗಡಿಗಳನ್ನು ಕೆಡವಿ ಹಾಕಲಾಯಿತು. ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಬಿಡಿಎ ಕ್ರಮವನ್ನು ಆಕ್ಷೇಪಿಸಿದ ಕೆಲ ಸ್ಥಳೀಯರು, `ಬಡವರು ವಾಸಿಸುವ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ಆದರೆ ಉತ್ತರಹಳ್ಳಿ ಸುತ್ತಮುತ್ತ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜತೆಗೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ದೂರಿದರು.
ಸ್ಥಳೀಯ ನಿವಾಸಿ ಹನುಮನರಸಪ್ಪ ಮಾತನಾಡಿ, `ತೋಟಿ ಮನೆತನದವರಾದ ನಮಗೆ ಸರ್ಕಾರ ಜಮೀನು ಮಂಜೂರು ಮಾಡಿತ್ತು. ದಾಖಲೆ ಪತ್ರಗಳನ್ನು ತೋರಿಸಿದರೂ ಬಿಡಿಎ ಅಧಿಕಾರಿಗಳು ನೋಡಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ತಲಘಟ್ಟಪುರ ಬಳಿಯ ಹೊಸಹಳ್ಳಿ ಮತ್ತಿತರ ಕಡೆ ದಲಿತರ ಜಮೀನುಗಳುನ್ನು ಕಿತ್ತುಕೊಳ್ಳುತ್ತಿದೆ~ ಎಂದು ಆರೋಪಿಸಿದರು.ಬಿಡಿಎ ಎಸ್.ಪಿ. ಎನ್.ಎನ್.ಇಂದಿರಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.