ADVERTISEMENT

ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೂ ಎಜುಸ್ಯಾಟ್‌

ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:06 IST
Last Updated 24 ಸೆಪ್ಟೆಂಬರ್ 2013, 20:06 IST

ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ 81 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲೂ ಎಜುಸ್ಯಾಟ್‌ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ಮಂಗಳವಾರ  ನೂತನ ವಿದ್ಯಾರ್ಥಿನಿ ನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ನಡೆದ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸದ್ಯ ರಾಜ್ಯದ 32 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಎಜುಸ್ಯಾಟ್‌ ಯೋಜನೆಯ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಯೋಜನೆಯನ್ನು ಎಲ್ಲ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲೂ ಜಾರಿಗೊಳಿಸಲಾಗುವುದು.

ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ತಾಂತ್ರಿಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ’ ಎಂದು ಅವರು ತಿಳಿಸಿದರು.

‘ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಕೈಗಾರಿಕೆಗಳ ನಡುವಿನ ಅಂತರವನ್ನು ತಗ್ಗಿಸಬೇಕು. ವಿದ್ಯಾರ್ಥಿಗಳನ್ನು ಆಗಾಗ ವಿವಿಧ ಕೈಗಾರಿಕೆಗಳಿಗೆ ಕರೆದುಕೊಂಡು ಹೋಗಬೇಕು. ಕೋರ್ಸ್‌ ಪೂರೈಸಿ ಕಾಲೇಜಿನಿಂದ ಹೊರ ಹೋದ ವಿದ್ಯಾರ್ಥಿಗಳು ಯಾವ ಯಾವ ಹುದ್ದೆಗಳಲ್ಲಿದ್ದಾರೆ ಎಂಬ ಅಂಕಿ ಅಂಶಗಳನ್ನು ಕಾಲೇಜಿನ ಸಿಬ್ಬಂದಿ ದಾಖಲಿಸಬೇಕು’ ಎಂದರು.

‘ಅಧ್ಯಾಪಕರು ಸರಿಯಾಗಿ ಸಮಯ ಪಾಲನೆ ಮಾಡಬೇಕು. ಕಾಲೇಜಿಗೆ ಬರುವಾಗ ಸರಿಯಾದ ಸಮಯಕ್ಕೆ ಬರಬೇಕು. ಆದರೆ, ಸಂಜೆ ಮನೆಗೆ ಹೋಗುವಾಗ ಗಡಿಯಾರ ನೋಡಬಾರದು. ಒಂದೆರಡು ಗಂಟೆ ಹೆಚ್ಚು ಪಾಠ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುತ್ತದೆ ಎಂಬ ಆಲೋಚನೆಯನ್ನು ಅಧ್ಯಾಪಕರು ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳೆಲ್ಲರೂ ತಮ್ಮ ಮಕ್ಕಳೆಂಬ ಭಾವನೆ ಅಧ್ಯಾಪಕರಲ್ಲಿರಬೇಕು. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಅಧ್ಯಾಪಕರು ಶ್ರಮಿಸಬೇಕು. ವಿದ್ಯಾರ್ಥಿಗಳ ಏಳಿಗೆಯಲ್ಲಿ ತಮ್ಮ ಸಂತೋಷ ಕಂಡುಕೊಳ್ಳಬೇಕು’ ಎಂದರು.

‘ಇಂದಿನ ಜಾಗತಿಕ ಸ್ಪರ್ಧೆಯ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಪ್ರತಿಭೆ ಹಾಗೂ ಉತ್ತಮ ನಡವಳಿಕೆಯ ಮೂಲಕ ವಿದ್ಯಾರ್ಥಿಗಳು ಗುರಿ ಸಾಧನೆಗೆ ಮುಂದಾಗಬೇಕು. ಇಂದಿನ ಯುವಜನತೆ ಮುಂದೆ ಆಯ್ಕೆಗಳು ಹೆಚ್ಚಾಗಿವೆ. ಹೆಚ್ಚಾಗಿರುವ ಆಯ್ಕೆಗಳಲ್ಲಿ ಉತ್ತಮವಾದುದನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ಹೇಳಿದರು.

ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್‌.ಯು.ತಳವಾರ್‌ ಮಾತನಾಡಿ, ‘ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಯನ್ನು ನೀಗಿಸಲು ಎಜುಸ್ಯಾಟ್‌ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಹೊಸ ವಿದ್ಯಾರ್ಥಿನಿ ನಿಲಯದಿಂದ ನಗರದ 5 ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಪಯೋಗವಾಗುತ್ತದೆ’ ಎಂದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಎಸ್‌ಜೆಪಿ ಕಾಲೇಜು ಆವರಣದಲ್ಲಿ ₨ 5 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿ ನಿಲಯದ ಕಟ್ಟಡ ನಿರ್ಮಾಣವಾಗಲಿದೆ. ಮೂರು ಮಹಡಿಗಳ ಕಟ್ಟಡದಲ್ಲಿ 43 ಕೊಠಡಿಗಳಿರಲಿದ್ದು, 258 ವಿದ್ಯಾರ್ಥಿನಿಯರು ಉಳಿದುಕೊಳ್ಳಬಹು
ದಾಗಿದೆ. 15 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಮುಗಿಸಲು ಗುತ್ತಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.