ADVERTISEMENT

ಸಹಾಯಕ ಆಯುಕ್ತರಿಂದ ಸಹೋದ್ಯೋಗಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:55 IST
Last Updated 13 ಸೆಪ್ಟೆಂಬರ್ 2011, 19:55 IST

ಬೆಂಗಳೂರು: ವಿಜಯನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಸ್ಥಳೀಯ ವ್ಯಾಟ್ ಕಚೇರಿಯ ಸಹಾಯಕ ಆಯುಕ್ತ ವೆಂಕಟೇಗೌಡ ಅವರು ದ್ವಿತೀಯ ದರ್ಜೆ ಸಹಾಯಕ ಆರ್.ಎಸ್.ಪಂಚಾಕ್ಷರಯ್ಯ ಅವರಿಗೆ ಕಚೇರಿಯಲ್ಲೇ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ನಗರದ ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಂಚಾಕ್ಷರಯ್ಯ ಅವರನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿ ಕೆಲಸದ ನಿಮಿತ್ತ (ಓಓಡಿ) ಇತ್ತೀಚೆಗೆ ವಿಜಯನಗರ ಶಾಖೆಗೆ ಕಳುಹಿಸಿದ್ದರು.

ಪಂಚಾಕ್ಷರಯ್ಯ ಅವರು ಸೆ.7ರಿಂದ ವಿಜಯನಗರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಗೌಡ ಅವರು ಪಂಚಾಕ್ಷರಯ್ಯ ಅವರೊಂದಿಗೆ ಪ್ರತಿನಿತ್ಯ ಜಗಳವಾಡಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಪಂಚಾಕ್ಷರಯ್ಯ ಅವರು ಮಂಗಳವಾರ ಕೋರಮಂಗಲದ ಮುಖ್ಯ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು. ದೂರನ್ನು ಪರಿಶೀಲಿಸಿದ ಅಧಿಕಾರಿಗಳು ವಿಜಯನಗರ ಕಚೇರಿಯಲ್ಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಸಂಜೆ ಐದು ಗಂಟೆ ಸುಮಾರಿಗೆ ವಿಜಯನಗರ ಕಚೇರಿಗೆ ಬಂದ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಮುಂದಾದರು.

ಇದಕ್ಕೆ ಅವಕಾಶ ನೀಡದ ವೆಂಕಟೇಗೌಡ ಅವರು, ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಇತರೆ ಸಹೋದ್ಯೋಗಿಗಳ ಸಮ್ಮುಖದಲ್ಲೇ ಮುಖಕ್ಕೆ ಚಪ್ಪಲಿಯಿಂದ ಹೊಡೆದು ಹಲ್ಲೆಯನ್ನು ನಡೆಸಿದ್ದಾರೆ.
ಘಟನೆ ಸಂಬಂಧ ವೆಂಕಟೇಗೌಡ ಅವರನ್ನು ಸಂಪರ್ಕಿಸಿದಾಗ, `ನನಗೆ ಆರೋಗ್ಯ ಸಮಸ್ಯೆ ಇದೆ. ಆದ ಕಾರಣ ಸಕಾಲಕ್ಕೆ ಆಹಾರ ಸೇವಿಸಬೇಕು. ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

`ವೆಂಕಟೇಗೌಡ ಅವರು ಇತರೆ ಸಹೋದ್ಯೋಗಿಗಳ ಎದುರೇ ನನಗೆ ಚಪ್ಪಲಿಯಿಂದ ಹೊಡೆದು ಹಲ್ಲೆಯನ್ನು ನಡೆಸಿದ್ದಾರೆ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇನೆ~ ಎಂದು ಪಂಚಾಕ್ಷರಯ್ಯ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.