ADVERTISEMENT

ಸಾಧಕ ವೈದ್ಯರಿಗೆ ಪ್ರಶಸ್ತಿ, ಸನ್ಮಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೆಂಗಳೂರು:  ನಿಮ್ಹಾನ್ಸ್‌ನ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರು ನಡೆಸುತ್ತಿರುವ ಸಮಾಧಾನ ಆಪ್ತ ಸಲಹಾ ಕೇಂದ್ರ ಸ್ಥಾಪನೆಯಾದ ಐದು ವರ್ಷಗಳ ಸವಿನೆನಪಿಗಾಗಿ ನೀಡಿದ `ಸಮಾಧಾನ ಜನಸೇವಾ ಪ್ರಶಸ್ತಿ~ ಯನ್ನು ಮನೋವೈದ್ಯ ಡಾ.ಆರ್.ಪಾರ್ಥಸಾರಥಿ, ದೂರದರ್ಶನ ನಿರೂಪಕ ಡಾ.ನಾ.ಸೋಮೇಶ್ವರ ಮತ್ತು ಆಪ್ತ ಸಲಹಾಗಾರ್ತಿ ಎಂ.ಸಿ.ಪಂಕಜಾ ಅವರಿಗೆ ಪ್ರದಾನ ಮಾಡಲಾಯಿತು.

 ನಗರದ ಅರಕೆರೆ ಮೈಕೋಲೇಔಟ್‌ನಲ್ಲಿರುವ ಸಮಾಧಾನ ಆಪ್ತ ಸಲಹಾ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾತನಾಡಿದ ನಿಮ್ಹೋನ್ಸ್‌ನ ರಿಜಿಸ್ತ್ರಾರ್ ಡಾ.ವಿ.ರವಿ, `ತಮ್ಮ ಸಂಸ್ಥೆಯ ಮೂಲಕ ಡಾ.ಸಿಆರ್.ಚಂದ್ರಶೇಖರ್ ಅವರು ಹಾಗೂ ಅವರ ಜೊತೆ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದಾರೆ. ಆಪ್ತ ಸಲಹೆಗಾರರು ಸಮಾಧಾನ ಕೇಂದ್ರದಲ್ಲಿ ಉಚಿತವಾಗಿ ಸಾವಿರಾರು ಜನರಿಗೆ ಸಲಹೆ ಮತ್ತು ಚಿಕಿತ್ಸೆ ನೀಡಿ ಅವರಿಗೆ ಜೀವನದಲ್ಲಿ ನೆಮ್ಮದಿ ತಂದು ಕೊಟ್ಟಿರುವುದು ಉತ್ತಮ ಕಾರ್ಯ~ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಡಾ.ರುದ್ರೇಶ್ ಅವರು ಡಾ.ಸಿ.ಆರ್.ಚಂದ್ರಶೇಖರ್ ಅವರ `ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಲಿ~ ಪುಸ್ತಕವನ್ನು ಬಿಡುಗಡೆ ಮಾಡಿದರು.

ನಾ.ಸೋಮೇಶ್ವರ ಅವರು ಆಪ್ತ ಸಲಹೆಗಾರರಿಗೆ ಆರೋಗ್ಯದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ಹಾಗೂ ಕಾಣಿಕೆಗಳನ್ನು ವಿತರಿಸಲಾಯಿತು. ಆರ್.ವಿ.ದಂತ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ನಾಗೇಶ್, ನಿಮ್ಹೋನ್ಸ್‌ನ ನಿವತ್ತ ಡೀನ್ ಡಾ.ಆರ್.ಶ್ರೀನಿವಾಸ ಮೂರ್ತಿ, ನಗೆ ಭಾಷಣಕಾರ ವೈ.ವಿ.ಗುಂಡೂರಾವ್, ಗಾಯಕ ಗರ್ತಿಗೆರೆ ರಾಘಣ್ಣ, ಹೋಮಿಯೋಪತಿ ವೈದ್ಯ ಡಾ.ರುದ್ರೇಶ್, ಸಂಸ್ಥೆಯ ಡಾ. ಸಿ.ನವೀನ್ ಕುಮಾರ್, ಡಾ.ಬಿ.ಎಂ.ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.