ADVERTISEMENT

ಸಾರಿಗೆ ಅವ್ಯವಸ್ಥೆ: ಪ್ರಯಾಣಿಕರ ಪ್ರಶ್ನೆಗೆ ಸಚಿವರು ನಿರುತ್ತರ

ತರಾತುರಿಯಲ್ಲಿ ಶೌಚಾಲಯಕ್ಕೆ ಸುಗಂಧ ದ್ರವ್ಯ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 19:30 IST
Last Updated 4 ನವೆಂಬರ್ 2017, 19:30 IST
ಮೆಜೆಸ್ಟಿಕ್‌ ಕೆಂಪೇಗೌಡ ಕೇಂದ್ರ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಸಾರಿಗೆ ಸಚಿವರು ಬರುತ್ತಿರುವುದನ್ನು ಕಂಡು ಸಿಬ್ಬಂದಿ, ಸುಗಂಧ ದ್ರವ್ಯ ಸಿಂಪಡಿಸಿದರು – ಪ್ರಜಾವಾಣಿ ಚಿತ್ರಗಳು
ಮೆಜೆಸ್ಟಿಕ್‌ ಕೆಂಪೇಗೌಡ ಕೇಂದ್ರ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಸಾರಿಗೆ ಸಚಿವರು ಬರುತ್ತಿರುವುದನ್ನು ಕಂಡು ಸಿಬ್ಬಂದಿ, ಸುಗಂಧ ದ್ರವ್ಯ ಸಿಂಪಡಿಸಿದರು – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಮೆಜೆಸ್ಟಿಕ್‌ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಸ್‌ ದಿನಾಚರಣೆಯು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ನಗರದ ಸಾರಿಗೆ ಸಮಸ್ಯೆಯ ದರ್ಶನ ಮಾಡಿಸಿತು. ಸಾರಿಗೆಯ ಅವ್ಯವಸ್ಥೆಗಳ ಬಗ್ಗೆ ಜನರ ಆಕ್ರೋಶಭರಿತ ಮಾತುಗಳನ್ನು ಕೇಳಿ ಸಚಿವರು ಮುಜುಗರಪಡುವ ಪರಿಸ್ಥಿತಿ ಉಂಟಾಯಿತು.

ನಿಗದಿಯಂತೆ ಬೆಳಿಗ್ಗೆ 11ಕ್ಕೆ ನಿಲ್ದಾಣಕ್ಕೆ ಬಂದ ಸಚಿವರು, ಮಹಿಳಾ ಪ್ರಯಾಣಿಕರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

‘ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ನಿಗಮಗಳು ಸಾಕಷ್ಟು ಸೌಲಭ್ಯ ಕಲ್ಪಿಸಿವೆ. ಸಾರ್ವಜನಿಕರು ಈ ನಿಗಮಗಳ ಬಸ್‌ಗಳಲ್ಲಿ ಸಂಚರಿಸಬೇಕು. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮಾಲಿನ್ಯದ ಪ್ರಮಾಣವೂ ತಗ್ಗಲಿದೆ’ ಎಂದರು.

ADVERTISEMENT

ಭಾಷಣದ ಮುಗಿಸಿದ ಬಳಿಕ ಕರಪತ್ರಗಳನ್ನು ಹಂಚಲು ಮೆರವಣಿಗೆ ಮೂಲಕ ಹೊರಟರು. ಈ ವೇಳೆ ಪ್ರಯಾಣಿಕರೊಬ್ಬರು, ‘ನಮಸ್ತೆ ಸರ್, ಭಾಷಣದಲ್ಲಿ ನೀವೇನೋ ನಿಗಮದ ಬಸ್‌ಗಳಲ್ಲಿ ಸಂಚರಿಸಿ ಎಂದು ಪುಕ್ಕಟೆ ಸಲಹೆ ಕೊಟ್ಟಿರಿ. ಆದರೆ, ಬಿಎಂಟಿಸಿ ಬಸ್‌ಗಳು ಸ್ವಲ್ಪವೂ ಸ್ವಚ್ಛವಾಗಿಲ್ಲ. ಬಾಗಿಲು, ಸೀಟುಗಳಲ್ಲಿನ ಧೂಳನ್ನು ಸ್ವಚ್ಛಗೊಳಿಸುವುದಿಲ್ಲ. ಕೆಲ ಬಸ್‌ಗಳಲ್ಲಿ ಉಸಿರಾಡುವುದೇ ಕಷ್ಟ. ಎಲ್ಲೆಂದರಲ್ಲಿ ಗುಟ್ಕಾ ಕಲೆಗಳು ಬೇರೆ. ಇಂಥ ಸ್ಥಿತಿಯಲ್ಲಿ ಅವುಗಳಲ್ಲಿ ಹೇಗೆ ಪ್ರಯಾಣಿಸುವುದು ನೀವೇ ಹೇಳಿ’ ಎಂದು ಪ್ರಶ್ನಿಸಿದರು. ಅದಕ್ಕೆ ಉಳಿದ ಪ್ರಯಾಣಿಕರೂ ಧ್ವನಿಗೂಡಿಸಿದರು.

ಪ್ರಯಾಣಿಕರ ಪ್ರಶ್ನೆಗಳಿಂದ ಮುಜುಗರಕ್ಕೀಡಾದ ಸಚಿವರು ಅರೆಕ್ಷಣ ಆವಾಕ್ಕಾದರು. ಬಳಿಕ ಆ ಪ್ರಯಾಣಿಕರ ಹೆಗಲ ಮೇಲೆ ಕೈ ಹಾಕಿ, ‘ಆಯ್ತು ಎಲ್ಲಾ ಸರಿ ಮಾಡುತ್ತೇನೆ. ಬಸ್‌ಗಳನ್ನು ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನೀವೆಲ್ಲ ಇನ್ನು ಮುಂದೆ ನಿಗಮದ ಬಸ್‌ಗಳಲ್ಲೇ ಸಂಚರಿಸಿ’ ಎಂದು ಹೇಳಿ ಅಲ್ಲಿಂದ ಹೊರಟರು.

ಸುಗಂಧದ್ರವ್ಯ ಸಿಂಪಡಿಸಿದ್ದಕ್ಕೆ ಗರಂ

ಸಚಿವರು ನಿಲ್ದಾಣದ ಶೌಚಾಲಯಕ್ಕೆ ದಿಢೀರ್‌ ಭೇಟಿ ನೀಡಿದರು. ಅವರು ಬರುವುದನ್ನು ಕಂಡ ಶೌಚಾಲಯ ನಿರ್ವಹಣಾ ಸಿಬ್ಬಂದಿಯೊಬ್ಬರು ತರಾತುರಿಯಲ್ಲಿ ಸುಗಂಧ ದ್ರವ್ಯ  ಸಿಂಪಡಿಸಲು ಶುರುಹಚ್ಚಿಕೊಂಡರು. ಅದನ್ನು ಗಮನಿಸಿದ ರೇವಣ್ಣ, ‘ನಾನು ಬರುತ್ತಿರುವುದನ್ನು ನೋಡಿ ಸುಗಂಧ ದ್ರವ್ಯ ಸಿಂಪಡಿಸುತ್ತಿದ್ದಿಯಾ’ ಎಂದು  ತರಾಟೆಗೆ ತೆಗೆದುಕೊಂಡರು. ಶೌಚಾಲಯದ ಮೂಲೆಯಲ್ಲಿದ್ದ ತ್ಯಾಜ್ಯ ರಾಶಿ ಬಿದ್ದಿದ್ದು ಕಂಡು ಗರಂ ಆದರು.

‘ಇಲ್ಲಿ ಮೂತ್ರ ವಿಸರ್ಜನೆಗೂ ಹಣ ತೆಗೆದುಕೊಳ್ಳುತ್ತಾರೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ’ ಎಂದು ಪ್ರಯಾಣಿಕರು ಸಮಸ್ಯೆ ಹೇಳಿಕೊಂಡರು.

‘ಗುತ್ತಿಗೆ ಕರಾರಿನನ್ವಯ ಶೌಚಾಲಯ ನಿರ್ವಹಿಸಬೇಕು. ಕೆಲ ದಿನ ಬಿಟ್ಟು ಮತ್ತೆ ಬರುತ್ತೇನೆ. ಅಷ್ಟರಲ್ಲಿ ಶೌಚಾಲಯ ವ್ಯವಸ್ಥೆ ಚೆನ್ನಾಗಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಮಹಿಳೆಯರ ಸುರಕ್ಷತೆಗೆ ಸಪ್ತಾಹ

‘ನಿಲ್ದಾಣ ಹಾಗೂ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಮಹಿಳಾ ಪ್ರಯಾಣಿಕರ ಸುರಕ್ಷತಾ ಸಪ್ತಾಹ ಹಮ್ಮಿಕೊಂಡಿದ್ದೇವೆ. ಯಾವುದೇ ಸಮಸ್ಯೆ ಇದ್ದರೂ ಮಹಿಳೆಯರು, 1800-425-1663 ಸಂಖ್ಯೆಗೆ ಉಚಿತ ಕರೆ ಮಾಡಬಹುದು. ಇ–ಮೇಲ್‌ (complaints@mybmtc.com) ಮೂಲಕವೂ ದೂರು ಸಲ್ಲಿಸಬಹುದು’ ಎಂದು ಸಚಿವ ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.