ADVERTISEMENT

ಸಾರಿಗೆ ನಿಗಮಗಳಿಗೆ ತೀವ್ರ ಸಂಕಷ್ಟ

ಏರಿದ ಡೀಸೆಲ್‌ ದರ; ನಷ್ಟ ಸರಿದೂಗಿಸಲು ಪರದಾಟ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:51 IST
Last Updated 25 ಮೇ 2018, 19:51 IST

ಬೆಂಗಳೂರು: ಡೀಸೆಲ್‌ ಬೆಲೆಯಲ್ಲಿ ದಿಢೀರ್‌ ಏರಿಕೆಯಾದ ಪರಿಣಾಮ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸಂಕಷ್ಟ ಎದುರಿಸುತ್ತಿವೆ. ನಿಗಮಗಳಿಗೆ ಪ್ರತಿ ತಿಂಗಳು ₹ 10 ಕೋಟಿ ನಷ್ಟವಾಗುತ್ತಿದೆ. ಒಂದೋ ನಷ್ಟದಲ್ಲಿ ನಿಗಮವನ್ನು ನಿರ್ವಹಿಸಬೇಕು ಅಥವಾ ಪ್ರಯಾಣ ದರವನ್ನು ಏರಿಕೆ ಮಾಡಬೇಕಾದ ಸ್ಥಿತಿ ಒದಗಿದೆ.

ಕೆಎಸ್‌ಆರ್‌ಟಿಸಿ ಇತ್ತೀಚೆಗಷ್ಟೇ ಕಳೆದ ವರ್ಷದ ಆದ ₹ 177 ಕೋಟಿ ನಷ್ಟದಿಂದ ಹೊರಬಂದಿತ್ತು. ಮಾತ್ರವಲ್ಲ ಈ ವರ್ಷದ ಆರಂಭದಲ್ಲಿ ₹ 10 ಕೋಟಿಯಷ್ಟು ಲಾಭ ದಾಖಲಿಸಿತ್ತು. ಸಂಸ್ಥೆಯು ಸಗಟು ದರದಲ್ಲಿ ಡೀಸೆಲ್‌ ಕೊಳ್ಳುತ್ತಿದೆ. ಇದರಿಂದಾಗಿ ಪ್ರತಿ ಲೀಟರ್‌ಗೆ ₹ 2ರಷ್ಟು ರಿಯಾಯಿತಿ ಅಥವಾ ಹೆಚ್ಚು ಪ್ರಮಾಣದ ಡೀಸೆಲ್‌ ಪಡೆಯಬಹುದಿತ್ತು.

ಏಕಪ್ರಕಾರವಾಗಿ ಇಂಧನ ದರ ಏರಿಕೆಯಿಂದಾಗುವ ಆರ್ಥಿಕ ಪರಿಣಾಮಗಳನ್ನು ಸಂಸ್ಥೆಯ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ.

ADVERTISEMENT

‘ಮೇ 14ರವರೆಗೆ ಪ್ರತಿ ಲೀಟರ್‌ ಡೀಸೆಲ್‌ಗೆ ₹ 63.03 ದರ ಇದ್ದದ್ದು ₹ 63.07ಕ್ಕೆ ಏರಿತು. ಇದರಿಂದ ಮಾಸಿಕ ₹ 7 ಲಕ್ಷದಷ್ಟು ಹೆಚ್ಚುವರಿ ವೆಚ್ಚದ ಹೊರೆ ಬಿತ್ತು. ಅದಾದ ಎರಡು ದಿನಗಳಲ್ಲೇ ಪ್ರತಿ ಲೀಟರ್‌ ಇಂಧನ ದರ ₹ 65.08ಕ್ಕೆ ಏರಿತು. ವೆಚ್ಚ ₹ 3.68 ಕೋಟಿಗೆ ಏರಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಇಂಧನ ದರ ಇದೇ ರೀತಿ ಏರುತ್ತಾ ಹೋದರೆ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಪ್ರತಿ ಲೀಟರ್‌ ಡೀಸೆಲ್‌ ದರ ₹ 60ರ ಕೆಳಗಿಳಿದರೂ ಆದಾಯ ಮತ್ತು ವೆಚ್ಚದಲ್ಲಿ ಸಮತೋಲನ ಸಾಧಿಸಲು ಕೆಲಕಾಲ ತಗಲುತ್ತದೆ’ ಎಂದು ಅಧಿಕಾರಿ ಹೇಳಿದರು.

ದರ ಏರಿಕೆ ಪರಿಣಾಮ ಬಿಎಂಟಿಸಿಯ ಸ್ಥಿತಿಯನ್ನೂ ಹದಗೆಡಿಸಿದೆ. ಇದುವರೆಗೆ ₹ 292 ಕೋಟಿ ನಷ್ಟವನ್ನು ಸರಿದೂಗಿಸಲು ಪ್ರಯತ್ನ ನಡೆಯುತ್ತಿರುವಾಗಲೇ ಡೀಸೆಲ್‌ ದರ ಏರಿದೆ. ಇದರಿಂದಾಗಿ ಮಾಸಿಕ ವೆಚ್ಚ ₹ 1.96 ಕೋಟಿಯಷ್ಟು ಏರಿಕೆಯಾಗಿದೆ.

ಈಶಾನ್ಯ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಎರಡೂ ಸಂಸ್ಥೆಗಳು ಡೀಸೆಲ್‌ಗಾಗಿ ₹ 3.65 ಕೋಟಿ ಹೆಚ್ಚುವರಿಯಾಗಿ ವಿನಿಯೋಗಿಸಬೇಕಿದೆ. 

ದರ ಏರಿಕೆ ಹೊಸ ಸರ್ಕಾರದ ನಿರ್ಧಾರ

ಕಳೆದ ವರ್ಷಾಂತ್ಯದಲ್ಲಿ ಪ್ರಯಾಣ ದರ ಏರಿಸಲು ಸರ್ಕಾರದ ಅನುಮತಿ ಕೇಳಿದ್ದೆವು. ಆದರೆ, ಸಾರ್ವಜನಿಕರ ಆಕ್ರೋಶ ಎದುರಿಸುವ ಭೀತಿಯಿಂದಾಗಿ ಸರ್ಕಾರ ಈ ಪ್ರಸ್ತಾವ ತಿರಸ್ಕರಿಸಿತ್ತು.

ಕೇಂದ್ರ ಸರ್ಕಾರ ಇಂಧನ ದರ ಇಳಿಸದಿದ್ದರೆ ಹೊಸ ಸರ್ಕಾರ ಮುಂದಿನ ದಿನಗಳಲ್ಲಿ ತೀವ್ರ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಒಂದೋ ಪ್ರಯಾಣ ದರ ಏರಿಸಲು ನಿರ್ಧರಿಸಬೇಕು. ಅಥವಾ ಪರಿಸ್ಥಿತಿ ಸರಿತೂಗಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.