ADVERTISEMENT

ಸಾರಿಗೆ ಸಂಸ್ಥೆ: ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:49 IST
Last Updated 18 ಜುಲೈ 2013, 19:49 IST

ಬೆಂಗಳೂರು: `ಸಾರಿಗೆ ಸಂಸ್ಥೆಯ 4ನಿಗಮಗಳ ಕಾರ್ಮಿಕರಿಗೆ ಹಲವು ವರ್ಷಗಳಿಂದ ಬಾಕಿ ಇರುವ ಬೋನಸ್ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು' ಎಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಎ.ವಿ.ಬೋರಶೆಟ್ಟಿ ಒತ್ತಾಯಿಸಿದರು.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಟಿಸಿ ನಿಗಮದ ಕಾರ್ಮಿಕರಿಗೆ ನಾಲ್ಕು ವರ್ಷಗಳಿಂದ, ಕೆಎಸ್‌ಆರ್‌ಟಿಸಿ ನಿಗಮದ ಕಾರ್ಮಿಕರಿಗೆ ಐದು ಹಾಗೂ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮದ ಕಾರ್ಮಿಕರಿಗೆ ಒಂಬತ್ತು ವರ್ಷಗಳಿಂದ ಬೋನಸ್ ಹಣವನ್ನು ನೀಡಿಲ್ಲ. ಶೀಘ್ರ ಈ ಹಣದ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಟ್ರೈನಿ ಆಗಿ ನೇಮಕ ಮಾಡಿಕೊಂಡ ಕಾರ್ಮಿಕರಿಗೆ ರೂ.6 ಸಾವಿರ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು 15 ಸಾವಿರಕ್ಕೆ ಹೆಚ್ಚಿಸಬೇಕು. ಸಂಸ್ಥೆಯಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಮುಂಬಡ್ತಿ ನೀಡಬೇಕು ಎಂದರು.

ನಿಗಮಗಳು ಮತ್ತು ವಿಭಾಗಗಳಿಗೆ ಕೋರಿಕೆಯ ಮೇರೆಗೆ ಕಾರ್ಮಿಕರನ್ನು ವರ್ಗಾವಣೆ ಮಾಡಬೇಕು. ಆರೋಗ್ಯ ನಿಧಿಗೆ ಕಾರ್ಮಿಕರ ವೇತನದಿಂದ ಹಣ ಪಡೆಯುವುದನ್ನು ನಿಲ್ಲಿಸಿ ಸಂಸ್ಥೆಯ ವತಿಯಿಂದ ಹಣವನ್ನು ಭರಿಸಬೇಕು. ಸಂಸ್ಥೆಯಲ್ಲಿನ ಕಾರ್ಮಿಕ ಸಂಘಗಳಿಗೆ 20 ವರ್ಷಗಳಿಂದ ಚುನಾವಣೆ ನಡೆಸಿಲ್ಲ. ಶೀಘ್ರ ಚುನಾವಣೆ ನಡೆಸಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಮನವಿ ಮಾಡಿದರು.

ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಹಿತದೃಷ್ಟಿಯಿಂದ ಈ ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು. ಮಂಡಳಿಯ ಹಿರಿಯ ಉಪಾಧ್ಯಕ್ಷರಾದ ಎ.ಎಸ್.ರಾಮು, ಎಂ.ಮಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.