ADVERTISEMENT

ಸಾಹಿತ್ಯ ವಾಚಿಕೆ ಪಠ್ಯಕ್ಕೆ ಸೇರಿಸುವ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST
ಸಾಹಿತ್ಯ ವಾಚಿಕೆ ಪಠ್ಯಕ್ಕೆ ಸೇರಿಸುವ ಅಗತ್ಯ
ಸಾಹಿತ್ಯ ವಾಚಿಕೆ ಪಠ್ಯಕ್ಕೆ ಸೇರಿಸುವ ಅಗತ್ಯ   

ಬೆಂಗಳೂರು: `ಸಾಹಿತಿಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಾಹಿತ್ಯ ವಾಚಿಕೆಗಳನ್ನು ವಿಶ್ವವಿದ್ಯಾಲಯಗಳ ಪಠ್ಯವಾಗಿ ಅಳವಡಿಸುವ ಅಗತ್ಯವಿದೆ~ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

 ಭಾನುವಾರ ನಯನ ಸಭಾಂಗಣದಲ್ಲಿ ನುಡಿ ಪ್ರಕಾಶನ ಹೊರತಂದಿರುವ ರಾಘವೇಂದ್ರ ಪಾಟೀಲ್ ಅವರ `ಎಚ್‌ಎಸ್‌ವಿ ವಾಚಿಕೆ~, ದಂಡಪ್ಪ ಕೊಂಡ್ರಹಳ್ಳಿ ಅವರ `ಸಿದ್ದಲಿಂಗಯ್ಯ ವಾಚಿಕೆ~ ಹಾಗೂ ಟಿ.ಎನ್.ವಾಸುದೇವಮೂರ್ತಿ ಅವರ `ಶಿಶು ಕಂಡ ಕನಸು~ (ಕಿ ರಂ ನೆನಪು) ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ವಿದ್ಯಾರ್ಥಿಗಳು ಲೇಖಕರೊಬ್ಬರ ಎಲ್ಲ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳುವ ಬದಲು ಆಯ್ದ ಭಾಗಗಳನ್ನು ಒಳಗೊಂಡ ಪಠ್ಯಗಳನ್ನು ಓದುವುದರಿಂದ ಲೇಖಕರ ಸಮಗ್ರ ಸಾಹಿತ್ಯದ ಬಗ್ಗೆ ಅರಿವು ಮೂಡುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಸಾಹಿತ್ಯ ವಾಚಿಕೆಗಳನ್ನು ಪಠ್ಯಪುಸ್ತಕಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮಾತನಾಡಿ, `ಜಂಜಡದ ಬದುಕಿನಲ್ಲಿ ಪುಸ್ತಕಗಳ ಓದು ಹೊರ ಜಗತ್ತಿನ, ಹೊರ ಆಯಾಮಗಳನ್ನು ತಿಳಿಸುತ್ತದೆ. ಹೀಗಾಗಿ ಎಲ್ಲರೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡಿಗರ ನಂತರ ಮೌಲಿಕವಾದ ಕಾವ್ಯ ರಚನೆ ಮಾಡಿರುವ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ವೈವಿಧ್ಯಮಯ ಭಾವ, ಛಂದಸ್ಸುಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿದ್ದಾರೆ~ ಎಂದರು.

ಕಾರ್ಯಕ್ರಮದಲ್ಲಿ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ವಿಮರ್ಶಕ ನಟರಾಜ್ ಹುಳಿಯಾರ್ ಹಾಗೂ ಲೇಖಕ ಟಿ.ಎನ್.ವಾಸುದೇವ್‌ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.