ADVERTISEMENT

ಸಿಇಟಿ: ಸ್ಪಾಟ್ ರ‌್ಯಾಂಕ್ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:55 IST
Last Updated 7 ಜುಲೈ 2012, 19:55 IST

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಷಯಗಳನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಪಿಯುಸಿಯಲ್ಲಿ ಈ ಎರಡು ವಿಷಯಗಳನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳ ಸ್ಪಾಟ್ ರ‌್ಯಾಂಕ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

1,300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಪಾಟ್ ರ‌್ಯಾಂಕ್ ನೀಡಲಾಗಿದೆ. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ವಿವರಗಳನ್ನು ಭಾನುವಾರ 2 ಗಂಟೆ ಒಳಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಆ ಮಾಹಿತಿಯನ್ನು ಆಧರಿಸಿ ಅವರಿಗೂ ರ‌್ಯಾಂಕ್ ನೀಡಲಾಗುತ್ತದೆ.


ಈ ವಿದ್ಯಾರ್ಥಿಗಳಿಗೆ ಇದೇ 10ರಂದು ನಿಗದಿತ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ತಮ್ಮ ವಾಸ ಸ್ಥಳದ ಹತ್ತಿರದಲ್ಲಿರುವ ದಾಖಲಾತಿ ಪರಿಶೀಲನಾ ಕೇಂದ್ರಕ್ಕೆ ಅಗತ್ಯವಿರುವ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ `ಪ್ರಜಾವಾಣಿ~ಗೆ ತಿಳಿಸಿದರು.

ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳನ್ನೂ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿ ಎಂದು ಹೈಕೋರ್ಟ್ ತೀರ್ಪು ನೀಡಿರುವುದರಿಂದ ಸ್ಪಾಟ್ ರ‌್ಯಾಂಕಿಂಗ್ ಪಟ್ಟಿ ಪ್ರಕಟಿಸಲಾಗಿದೆ. ರ‌್ಯಾಂಕ್ ಪಟ್ಟಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಸ್ಪಾಟ್ ರ‌್ಯಾಂಕ್ ಪಟ್ಟಿ ಪ್ರಕಟವಾಗಿರುವುದರಿಂದ ಹಾಲಿ ಇರುವ ರ‌್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಉದಾಹರಣೆಗೆ ಸ್ಪಾಟ್ ರ‌್ಯಾಂಕಿಂಗ್‌ನಲ್ಲಿ 1,350 ರ‌್ಯಾಂಕ್ ಪಡೆದಿದ್ದರೆ 1,350`ಜಿ~ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಿಂದೆ 1,350ನೇ ರ‌್ಯಾಂಕ್ ಪಡೆದಿದ್ದ ವಿದ್ಯಾರ್ಥಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.