ADVERTISEMENT

ಸಿ.ಎ ವಿದ್ಯಾರ್ಥಿ ಸಾವು; ಡ್ರಗ್ಸ್‌ ಸೇವನೆ ಶಂಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:20 IST
Last Updated 28 ಫೆಬ್ರುವರಿ 2018, 20:20 IST

ಬೆಂಗಳೂರು: ಬಾಣಸವಾಡಿಯ ಕಲ್ಯಾಣನಗರದ ‘ಒಯೊ’ ವಸತಿಗೃಹದಲ್ಲಿ ಸಿ.ಎ ವಿದ್ಯಾರ್ಥಿ ಶ್ರೀನಿವಾಸ್ (29) ಎಂಬುವರ ಶವ ಪತ್ತೆಯಾಗಿದೆ. ಅತಿಯಾದ ಡ್ರಗ್ಸ್‌ ಸೇವನೆಯಿಂದ ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಶ್ರೀನಿವಾಸ್‌ ಲೆಕ್ಕ ಪರಿಶೋಧಕನಾಗುವ ಕನಸು ಹೊತ್ತಿದ್ದರು. ಈ ಸಲುವಾಗಿ ಅಧ್ಯಯನ ನಡೆಸುತ್ತಿದ್ದರು. ಕೆಲ ವರ್ಷಗಳ ಹಿಂದಷ್ಟೇ ಪರಿಚಯವಾಗಿದ್ದ ಯುವತಿಯೊಬ್ಬರನ್ನು ಪ್ರೀತಿಸಲು ಆರಂಭಿಸಿದ್ದ ಅವರು, ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರು. ಅದಕ್ಕೆ ಒಪ್ಪಿದ್ದ ಪೋಷಕರು ಎರಡು ವಾರದ ಹಿಂದಷ್ಟೇ ಅವರಿಬ್ಬರ ನಿಶ್ಚಿತಾರ್ಥ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಯುವತಿಗೆ ಮಂಗಳವಾರ ರಾತ್ರಿ ಕರೆ ಮಾಡಿದ್ದ ಶ್ರೀನಿವಾಸ್, ‘ಒಯೊ’ ವಸತಿಗೃಹದಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ. ಬುಧವಾರ ಬೆಳಿಗ್ಗೆ ಬಂದು ಹೋಗು’ ಎಂದು ಕರೆದಿದ್ದರು. ಅದರಂತೆ ಯುವತಿಯು ಬೆಳಿಗ್ಗೆ ಕೊಠಡಿಗೆ ಹೋದಾಗ ಶ್ರೀನಿವಾಸ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ವಸತಿಗೃಹದ ಸಿಬ್ಬಂದಿ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು ಎಂದು ತಿಳಿಸಿದರು.

ADVERTISEMENT

ವಸತಿಗೃಹಕ್ಕೆ ಬುಧವಾರ ಸಂಜೆ ಬಂದಿದ್ದ ಶ್ರೀನಿವಾಸ್, ಗುರುತಿನ ಚೀಟಿ ನೀಡಿ ಕೊಠಡಿ ಪಡೆದುಕೊಂಡಿದ್ದರು. ಸಿಬ್ಬಂದಿಯಿಂದ ರಾತ್ರಿ ಊಟವನ್ನೂ ತರಿಸಿಕೊಂಡಿದ್ದರು. ಬಳಿಕ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಬೆಳಿಗ್ಗೆ ಯುವತಿ ಕೂಗಿದಾಗಲೇ ವಿಷಯ ಗೊತ್ತಾಯಿತು ಎಂದು ವಸತಿಗೃಹದ ವ್ಯವಸ್ಥಾಪಕರು ಹೇಳಿರುವುದಾಗಿ ವಿವರಿಸಿದರು.

ಕೈ ಮೇಲೆ ಚುಚ್ಚಿದ ಗಾಯ:

‘ವಸತಿಗೃಹದ ಕೊಠಡಿಗೆ ಹೋಗಿ ಪರಿಶೀಲನೆ ನಡೆಸಿದೆವು. ಅಲ್ಲಿ ಎರಡು ಚುಚ್ಚುಮದ್ದುಗಳು ಸಿಕ್ಕಿವೆ. ಅದರಲ್ಲಿ ಮಾದಕ ವಸ್ತುವಿನ ಅಂಶವಿರುವ ಶಂಕೆ ಇದೆ. ಜತೆಗೆ ಶ್ರೀನಿವಾಸ್‌ ಕೈ ಮೇಲೆ ಚುಚ್ಚುಮದ್ದು ಚುಚ್ಚಿರುವ ಗಾಯಗಳಿವೆ. ಹಲವು ದಿನಗಳಿಂದಲೇ ಅವರು ಮಾದಕ ವ್ಯಸನಿ ಆಗಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅದುವೇ ಅವರ ಸಾವಿಗೂ ಕಾರಣವಾಗಿರಬಹುದು’ ಎಂದು ಪೊಲೀಸರು ತಿಳಿಸಿದರು.

‘ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವೈದ್ಯರು ವರದಿ ನೀಡಿದ ಬಳಿಕವೇ ಡ್ರಗ್ಸ್‌ ಸೇವನೆ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದರು.

‘ತಾಯಿ ಹಾಗೂ ಮದುವೆ ನಿಶ್ಚಯವಾಗಿದ್ದ ಯುವತಿಯ ಹೇಳಿಕೆ ಪಡೆದಿದ್ದೇವೆ. ಶ್ರೀನಿವಾಸ್‌ ತಮ್ಮೊಂದಿಗೆ ಚೆನ್ನಾಗಿಯೇ ಇದ್ದರು. ಡ್ರಗ್ಸ್‌ ಸೇವಿಸುತ್ತಿದ್ದ ಬಗ್ಗೆ ನಮಗೇನೂ ಗೊತ್ತಿಲ್ಲವೆಂದು ಅವರಿಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.