ADVERTISEMENT

ಸಿಗದ ನಿರೀಕ್ಷಿತ ಅನುದಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:15 IST
Last Updated 24 ಫೆಬ್ರುವರಿ 2011, 20:15 IST


ಬೆಂಗಳೂರು: ರಾಜ್ಯ ಸರ್ಕಾರದ 2011-12ನೇ ಸಾಲಿನ ಆಯವ್ಯಯದಲ್ಲಿ ಬಿಬಿಎಂಪಿಗೆ ನಿರೀಕ್ಷಿತ ಮೊತ್ತದ ಅನುದಾನ ನೀಡಿಲ್ಲ ಎಂದು ಪಾಲಿಕೆ ವಿರೋಧ ಪಕ್ಷಗಳು ಆರೋಪಿಸಿವೆ. ಈ ನಡುವೆ ಆಯವ್ಯಯವನ್ನು ಸ್ವಾಗತಿಸಿರುವ ಬಿಜೆಪಿ ಸದಸ್ಯರು ಹೆಚ್ಚಿನ ಅನುದಾನ ಕೋರಿ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

‘ಬೆಂಗಳೂರನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂಬ ನಂಬಿಕೆಯಿಂದ ಜನತೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಬಿಬಿಎಂಪಿಗೆ ನಿರೀಕ್ಷಿತ ಅನುದಾನ ನೀಡದೇ ವಂಚಿಸಿದ್ದಾರೆ. ಕಳೆದ ವರ್ಷ ಘೋಷಿಸಿದ್ದ 1,300 ಕೋಟಿ ರೂಪಾಯಿ ಅನುದಾನ ಕೂಡ ಬಿಡುಗಡೆಯಾಗಿಲ್ಲ. ಆ ಮೂಲಕ ಬೆಂಗಳೂರನ್ನು ನಿರ್ಲಕ್ಷಿಸಿದ್ದಾರೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ. ನಾಗರಾಜ್ ದೂರಿದರು.

‘ಬಿಬಿಎಂಪಿಯನ್ನು ನಿರ್ಲಕ್ಷಿಸುತ್ತಲೇ ಬಂದ ಮುಖ್ಯಮಂತ್ರಿಗಳು ಈ ಬಾರಿಯೂ ಕಡಿಮೆ ಅನುದಾನ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ. ಇದರಿಂದ ಮೇಯರ್ ಎಸ್.ಕೆ.ನಟರಾಜ್ ಅವರಿಗೆ ಮುಖಭಂಗವಾಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿ ಹೋರಾಟ ನಡೆಸಲಾಗುವುದು’ ಎಂದರು.

ರೂ 5,000 ಕೋಟಿ ಅನುದಾನ ನೀಡಿ: ‘ಬೆಂಗಳೂರು ನಗರ ದಿನೇ ದಿನೇ ಬೆಳೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಈಗಾಗಲೇ ಪಾಲಿಕೆ ವಿವಿಧ ಹಣಕಾಸು ಸಂಸ್ಥೆಗಳಿಂದ ರೂ 3,200 ಕೋಟಿ ಸಾಲ ಪಡೆದಿದೆ. 2,000 ಕೋಟಿ ರೂಪಾಯಿ ಮೊತ್ತದ ಬಿಲ್ ಪಾವತಿ ಬಾಕಿ ಉಳಿದಿದೆ. ಹಾಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಲಿಕೆಯನ್ನು ಪಾರು ಮಾಡಲು ಕನಿಷ್ಠ 5,000 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಬೇಕು’ ಎಂದು ಪಾಲಿಕೆ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದರು.

ಮುಖ್ಯಮಂತ್ರಿ ಬಳಿಗೆ ನಿಯೋಗ: ‘ಬಿಜೆಪಿ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಸುಮಾರು 4,770 ಕೋಟಿ ರೂಪಾಯಿ ಅನುದಾನ ನೀಡಿದೆ. ಬಿಬಿಎಂಪಿಗೂ 350 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಆದರೆ ಇನ್ನೂ 1,500 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದಕ್ಕೂ ಅನುದಾನ ನೀಡುವಂತೆ ಕೋರಿ ಮೇಯರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಿದೆ’ ಎಂದು ಪಾಲಿಕೆ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್.ಸದಾಶಿವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.