ADVERTISEMENT

ಸಿಗ್ನಲ್‌ಮುಕ್ತ ಕಾರಿಡಾರ್‌ಗೆ 46 ಮರಗಳ ಹನನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:31 IST
Last Updated 11 ಜುಲೈ 2017, 19:31 IST
ಸಿಗ್ನಲ್‌ಮುಕ್ತ ಕಾರಿಡಾರ್‌ನ ನೀಲನಕ್ಷೆಯನ್ನು ಕೆ.ಜೆ. ಜಾರ್ಜ್‌ ಅವಲೋಕಿಸಿದರು. ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥಪ್ರಸಾದ್‌, ಸಿ.ವಿ. ರಾಮನ್‌ ನಗರ ಶಾಸಕ ಎಸ್‌. ರಘು ಇದ್ದಾರೆ –ಪ್ರಜಾವಾಣಿ ಚಿತ್ರ
ಸಿಗ್ನಲ್‌ಮುಕ್ತ ಕಾರಿಡಾರ್‌ನ ನೀಲನಕ್ಷೆಯನ್ನು ಕೆ.ಜೆ. ಜಾರ್ಜ್‌ ಅವಲೋಕಿಸಿದರು. ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥಪ್ರಸಾದ್‌, ಸಿ.ವಿ. ರಾಮನ್‌ ನಗರ ಶಾಸಕ ಎಸ್‌. ರಘು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ 33 ಕಿ.ಮೀ ಉದ್ದದ ಸಿಗ್ನಲ್‌ಮುಕ್ತ ಕಾರಿಡಾರ್‌ ನಿರ್ಮಿಸಲು 46 ಮರಗಳನ್ನು ಕಡಿಯಬೇಕಿದೆ’ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಕೆಳಸೇತುವೆ ನಿರ್ಮಿಸಲು ಗುರುತಿಸಿರುವ ಸ್ಥಳಗಳಾದ ಹಳೆ ವಿಮಾನ ನಿಲ್ದಾಣ ರಸ್ತೆಯ (ಕಾರಿಡಾರ್-1) ಎನ್ಎಎಲ್ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ) ಜಂಕ್ಷನ್, ಸುರಂಜನದಾಸ್ ರಸ್ತೆ, ಕುಂದಲಹಳ್ಳಿ ಜಂಕ್ಷನ್ ಮತ್ತು ಹಳೆ ಮದ್ರಾಸ್ ರಸ್ತೆಯ (ಕಾರಿಡಾರ್-2) ಓ ಫಾರಂ ಜಂಕ್ಷನ್, ಐಟಿಪಿಎಲ್ ಜಂಕ್ಷನ್ ಹಾಗೂ ಮೇಲ್ಸೇತುವೆ ನಿರ್ಮಾಣವಾಗಲಿರುವ ಹೂಡಿ ಜಂಕ್ಷನ್‌ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಒಟ್ಟು ₹275 ಕೋಟಿ ವೆಚ್ಚದಲ್ಲಿ  ಸಿಗ್ನಲ್‌ ಮುಕ್ತ ಕಾರಿಡಾರ್‌, ಆರು ಕೆಳಸೇತುವೆ ಹಾಗೂ ಒಂದು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಕೆಲಸ ಚುರುಕುಗೊಳಿಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಕುಂದಲಹಳ್ಳಿ ಜಂಕ್ಷನ್ ಸಮೀಪದ ವಿಬ್ಗಯಾರ್ ರಸ್ತೆಯ ಡಾಂಬರೀಕರಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದರು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಅಧಿಕಾರಿಗಳು, ‘ಈ ರಸ್ತೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ರಸ್ತೆ ಅಭಿವೃದ್ಧಿ ಕೈಗೊಂಡಿಲ್ಲ. ಇತ್ಯರ್ಥಗೊಂಡ ತಕ್ಷಣ ಡಾಂಬರೀಕರಣ ಮಾಡುತ್ತೇವೆ’ ಎಂದು ಹೇಳಿದರು.

ಮೇಯರ್‌ ಜಿ. ಪದ್ಮಾವತಿ, ‘ವರ್ತೂರು ಕೋಡಿ ಮತ್ತು ವೈಟ್‌ಫೀಲ್ಡ್‌ ಸಮೀಪದ ಹೋಪ್‌ ಫಾರಂ ಜಂಕ್ಷನ್‌ ಬಳಿ ಕೆಳಸೇತುವೆ ಕಾಮಗಾರಿ ಅತ್ಯಂತ ನಿಧಾನವಾಗಿ ಸಾಗುತ್ತಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು  ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.