ADVERTISEMENT

ಸಿಜೆ ಎದುರು ಅರ್ಜಿ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:40 IST
Last Updated 2 ಮೇ 2012, 19:40 IST

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಾತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಮರು ವಿಚಾರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಹಿರಿಯ ಐಪಿಎಸ್ ಅಧಿಕಾರಿ ಶಂಕರ ಬಿದರಿ ಮತ್ತು ರಾಜ್ಯ ಸರ್ಕಾರ ಬುಧವಾರ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮುಖ್ಯ ನ್ಯಾಯಮೂರ್ತಿಯವರ ಎದುರು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

ಬುಧವಾರ ರಜಾಕಾಲದ ವಿಶೇಷ ಪೀಠದ ವಿಚಾರಣೆ ವೇಳೆ ಅರ್ಜಿ ಸಲ್ಲಿಸಿದ ಬಿದರಿ ಪರ ವಕೀಲರು ಮತ್ತು ಸರ್ಕಾರಿ ವಕೀಲರು, ಶೀಘ್ರಗತಿಯಲ್ಲಿ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿದರು. ಆದರೆ, ಈ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು, `ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಅಧಿಕಾರ ಮುಖ್ಯ ನ್ಯಾಯಮೂರ್ತಿಯವರಿಗೆ ಮಾತ್ರ ಇದೆ.

ಆದ್ದರಿಂದ ರಿಜಿಸ್ಟ್ರಿಯ ಮೂಲಕವೇ ಅರ್ಜಿ ಸಲ್ಲಿಸಿ. ಮುಖ್ಯ ನ್ಯಾಯಮೂರ್ತಿಯವರೇ ಈ ಸಂಬಂಧ ತೀರ್ಮಾನ ಕೈಗೊಳ್ಳುತ್ತಾರೆ~ ಎಂದು ಬಿದರಿ ಮತ್ತು ಸರ್ಕಾರದ ಪರ ವಕೀಲರಿಗೆ ಸೂಚಿಸಿದರು.
ಬಿದರಿ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಿದ ಆದೇಶವನ್ನು ಹೈಕೋರ್ಟ್ ಕೆಲ ದಿನಗಳ ಹಿಂದೆ ರದ್ದು ಮಾಡಿತ್ತು.

ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಾಚರಣೆ ಪಡೆಯಿಂದ ಸ್ಥಳೀಯರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದ ಅಭಿಪ್ರಾಯವನ್ನು ಆಧರಿಸಿ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿತ್ತು.

ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಬಿದರಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ಅಂತಿಮ ವರದಿಯಲ್ಲಿ ತಮ್ಮನ್ನು ದೋಷಮುಕ್ತರನ್ನಾಗಿ ಮಾಡಿದೆ ಎಂದು ವಾದಿಸಿದ್ದರು. ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್‌ನಲ್ಲಿ ಪ್ರಕರಣದ ಮರು ವಿಚಾರಣೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.