ADVERTISEMENT

ಸಿಡಿಮದ್ದು ಸ್ಫೋಟ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:23 IST
Last Updated 10 ಮಾರ್ಚ್ 2014, 20:23 IST

ಬೆಂಗಳೂರು: ಕಲಾಸಿಪಾಳ್ಯ ಬಸ್‌ ನಿಲ್ದಾಣದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬಸ್‌ ನಿಲ್ದಾಣದೊಳಗಿನ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಕವರ್‌ಗಳಲ್ಲಿದ್ದ ಎರಡು ಸಿಡಿಮದ್ದುಗಳು (ಕೃಷಿ ಜಮೀನಿಗೆ ಬರುವ ಹಂದಿಗಳನ್ನು ಕೊಲ್ಲಲು ಬಳಸುವ ಪಟಾಕಿ ಮಾದರಿಯ ಸ್ಫೋಟಕ) ಬೆಳಿಗ್ಗೆ 9.15ರಿಂದ 9.30ರೊಳಗೆ ಸ್ಫೋಟಗೊಂಡಿವೆ.

ಸ್ಫೋಟದ ಶಬ್ದ ಕೇಳಿದ ಪ್ರಯಾಣಿಕರು ಮತ್ತು ಸಾರ್ವಜನಿಕರು ಬಾಂಬ್‌ ಸ್ಫೋಟ ಸಂಭವಿಸಿರ­ಬಹುದೆಂದು ಆತಂಕಕ್ಕೀಡಾದರು. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್‌ ನಿಷ್ಕ್ರಿಯದಳ, ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

ಘಟನೆಯಲ್ಲಿ ಚರಣ್‌ ಮತ್ತು ರಾಮ್‌ಗೋಪಾಲ್‌ ಎಂಬುವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ದೇವಸಂದ್ರದ ಚರಣ್‌, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಓದುತ್ತಿದ್ದಾರೆ.

ಖಾಸಗಿ ಬಸ್‌ನಲ್ಲಿ ಬೆಳಿಗ್ಗೆ ಕಲಾಸಿಪಾಳ್ಯಕ್ಕೆ ಬಂದ ಅವರು ಜ್ಞಾನಭಾರತಿ ಕಡೆಗೆ ಹೋಗುವ ಬಸ್‌ಗೆ ಹತ್ತಲು ಹೋಗುತ್ತಿದ್ದಾಗ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ಸಿಡಿಮದ್ದಿನ ಕವರ್‌ನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾರೆ. ಆಗ ಸಿಡಿಮದ್ದು ಸ್ಫೋಟಗೊಂಡಿದೆ. ಆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಮತ್ತೊಂದು ಸಿಡಿಮದ್ದಿನ ಕವರ್‌ನ ಮೇಲೆ ರಾಮ್‌ಗೋಪಾಲ್‌ ಅವರು ಕಾಲಿಟ್ಟಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯ ಬಳಿಯ ಕಾವೇರಿಪುರ ನಿವಾಸಿಯಾದ ರಾಮ್‌ಗೋಪಾಲ್‌, ಜೆ.ಸಿ.ರಸ್ತೆಯಲ್ಲಿನ ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

ದೂರು ದಾಖಲು
‘ಘಟನಾ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್‌  ತಜ್ಞರು ವರದಿ ನೀಡಿದ ನಂತರ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಘಟನೆ ಸಂಬಂಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT