ADVERTISEMENT

ಸಿಬಿಐ ತನಿಖೆ ಆದೇಶಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ಮಂಗಳೂರಿನ ಕ್ರಿಮಿನಲ್ ಪ್ರಕರಣಗಳ ವಕೀಲರಾಗಿದ್ದ ನೌಶಾದ್ ಖಾಸಿಂ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್‌ನ ಏಕಸದಸ್ಯಪೀಠ ಹೊರಡಿಸಿರುವ ಆದೇಶಕ್ಕೆ ವಿಭಾಗೀಯ ಪೀಠ ಸೋಮವಾರ ತಡೆ ನೀಡಿದೆ.

2009ರ ಜೂನ್ 26ರಂದು ನಡೆದಿರುವ ಈ ಕೊಲೆಗೆ ಸಂಬಂಧಿಸಿದಂತೆ, ಸಿಬಿಐ ತನಿಖೆಗೆ ಕೋರಿ ಅವರ ಪತ್ನಿ ನುಸ್ರತ್ ಜಹಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠವು, ಜುಲೈ ತಿಂಗಳಿನಲ್ಲಿ ಸಿಬಿಐ ತನಿಖೆಗೆ ವಹಿಸಿತ್ತು.ಕೊಲೆ ಪ್ರಕರಣದಲ್ಲಿ ಪೊಲೀಸರು ಕೂಡ ಭಾಗಿಯಾಗಿದ್ದು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನುಸ್ರತ್ ಆರೋಪಿಸಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಪೊಲೀಸರೇ, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ದಾಖಲೆಗಳನ್ನು ಕಲೆ ಹಾಕಲು ಅವರು ವಿಫಲರಾಗಿದ್ದಾರೆಎನ್ನುವುದು ಅವರ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಕೊಲೆಗೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳನ್ನು ಸಿಬಿಐಗೆ ನೀಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸ್ದ್ದಿದರು.

ಈ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.
 
`ಪೊಲೀಸರು ಯಾವ ರೀತಿಯಲ್ಲಿ ತನಿಖೆ ನಡೆಸಲು ವಿಫಲರಾಗಿದ್ದಾರೆ ಎಂಬ ಬಗ್ಗೆ ಏಕಸದಸ್ಯಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿಲ್ಲ. ಪೊಲೀಸರು ಇದರ ವಿಚಾರಣೆ ನಡೆಸುತ್ತಿರುವ ಮಧ್ಯೆಯೇ, ಎಲ್ಲ ದಾಖಲೆಗಳನ್ನು ಸಿಬಿಐಗೆ ವಹಿಸಿಕೊಡುವಂತೆ ಹೇಳಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.