ADVERTISEMENT

ಸಿಲಿಂಡರ್‌ಗಳಲ್ಲಿ ಗಾಂಜಾ ಇಟ್ಟು ಮಾರುತ್ತಿದ್ದ ‘ಗುಲಾಬಿ’ ಸೆರೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:39 IST
Last Updated 12 ಡಿಸೆಂಬರ್ 2017, 19:39 IST
ಸಿಲಿಂಡರ್‌ ಪರಿಶೀಲಿಸಿದ ಸೀಮಂತ್ ಕುಮಾರ್ ಸಿಂಗ್. ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಇದ್ದಾರೆ
ಸಿಲಿಂಡರ್‌ ಪರಿಶೀಲಿಸಿದ ಸೀಮಂತ್ ಕುಮಾರ್ ಸಿಂಗ್. ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಇದ್ದಾರೆ   

ಬೆಂಗಳೂರು: ಕೆ.ಆರ್.ಪುರ ರೈಲು ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಸಿಲಿಂಡರ್‌ಗಳಲ್ಲಿ ಗಾಂಜಾ ಪೊಟ್ಟಣಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರುತ್ತಿದ್ದ ಆರೋಪದಡಿ ಗುಲಾಬ್‌ಜಾನ್ ಅಲಿಯಾಸ್ ಗುಲಾಬಿ (40) ರಾಮಮೂರ್ತಿನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಮಮೂರ್ತಿನಗರದ ವಿಜಿನಾಪುರದ ನಿವಾಸಿಯಾದ ಗುಲಾಬ್‌ಜಾನ್ ಅಲಿಯಾಸ್ ಗುಲಾಬಿ ಅವರಿಂದ 3.35 ಕೆ.ಜಿ ತೂಕದ ಗಾಂಜಾ, ಗಾಂಜಾ ಸಾಗಣೆಗೆ ಬಳಸಿದ್ದ ಎರಡು ಸಿಲಿಂಡರ್‌ಗಳು, ಆಟೊ, ಮೊಬೈಲ್ ಹಾಗೂ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದ ಗುಲಾಬಿ ಹಣದಾಸೆಗೆ ಗಾಂಜಾ ಮಾರಾಟಕ್ಕೆ ಇಳಿದಿದ್ದರು ಎಂದು ರಾಮೂರ್ತಿನಗರ ಪೊಲೀಸರು ಹೇಳಿದರು.

ರೈಲು ನಿಲ್ದಾಣದ ಬಳಿ ಸೋಮವಾರ ಸಂಜೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತ್ತು. ಅದರನ್ವಯ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

ಬೀಡಾ ಅಂಗಡಿಗಳು ಹಾಗೂ ಕಡಲೇಕಾಯಿಗಳಲ್ಲಿ ಗಾಂಜಾ ಇಟ್ಟು ಮಾರುತ್ತಿದ್ದ ಪ್ರಕರಣಗಳು ಈ ಹಿಂದೆ ಪತ್ತೆಯಾಗಿದ್ದವು. ಆದರೆ, ಗಾಂಜಾ ಮಾರಾಟ ಜಾಲದಲ್ಲಿ ಸಿಲಿಂಡರ್ ಬಳಸಿದ ಪ್ರಕರಣ ಬಯಲಾಗಿರುವುದು ಇದೇ ಮೊದಲು ಎಂದು ವಿವರಿಸಿದರು.

ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಹದ್ದೂರ್‌ ಅವರಿಗಾಗಿ ಹುಡುಕಾಟ ನಡೆಸಿದ್ದೇವೆ. ಬಂಧಿತರ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯ್ದೆಯಡಿ (ಎನ್‌ಡಿಪಿಎಸ್‌) ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

ಸಿಲಿಂಡರ್‌ಗೆ ಲಾಕರ್ ಅಳವಡಿಕೆ: ಗ್ಯಾಸ್ ಪೂರೈಕೆದಾರರಿಂದ ಖಾಲಿ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದ ದಂಧೆಕೋರರು, ಅವುಗಳ ತಳಭಾಗವನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದಕ್ಕೆ ಲಾಕರ್‌ಗಳನ್ನು ಅಳವಡಿಸಿದ್ದರು. ಬಳಿಕ ಸಿಲಿಂಡರ್‌ಗಳಲ್ಲಿ ಗಾಂಜಾ ತುಂಬಿಕೊಂಡು ಸಾಗಿಸುತ್ತಿದ್ದರು. ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಈ ತಂತ್ರದ ಮೊರೆ ಹೋಗಿದ್ದರು ಎಂದು ಪೊಲೀಸರು ವಿವರಿಸಿದರು.

ಗಾಂಜಾ ತುಂಬಿದ್ದ ಸಿಲಿಂಡರ್‌ಗಳನ್ನು ಆಟೊಗಳಲ್ಲಿ ಇಟ್ಟುಕೊಂಡು ಠಾಣಾ ವ್ಯಾಪ್ತಿಯಲ್ಲಿ ತಿರುಗಾಡುತ್ತಾ ಗಾಂಜಾ ಮಾರುತ್ತಿದ್ದರು. ಆರೋಪಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದವರ ಬಗ್ಗೆಯೂ ಸುಳಿವು ಸಿಕ್ಕಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದರು.

ಗುಲಾಬಿ ಮಧ್ಯವರ್ತಿ: ‘ಮೇಡಹಳ್ಳಿಯಿಂದ ಕೆ.ಆರ್.ಪುರ ರೈಲು ನಿಲ್ದಾಣದ ಬಳಿಗೆ ಸಿಲಿಂಡರ್ ಸಾಗಿಸಬೇಕು. ಅಲ್ಲಿ ನಮ್ಮ ಕಡೆಯವರು ಸಿಲಿಂಡರ್ ಪಡೆದುಕೊಳ್ಳುತ್ತಾರೆ ಎಂದು ಬಹದ್ದೂರ್ ಎಂಬುವರು ಹೇಳಿದ್ದರು. ಅದರಂತೆ ಆಟೊದ ಮೂಲಕ ಸಿಲಿಂಡರ್‌ಗಳನ್ನು ಸಾಗಿಸಿದ್ದೆ. ಅವುಗಳಲ್ಲಿ ಗಾಂಜಾ ಪೊಟ್ಟಣಗಳಿವೆ ಎಂಬುದು ಗೊತ್ತಿರಲಿಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾರೆ. ಬಹದ್ದೂರ್ ಪತ್ತೆಯಾದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಮಮೂರ್ತಿನಗರ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.