ADVERTISEMENT

ಸಿಲಿಂಡರ್ ಅಕ್ರಮ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಅಡುಗೆ ಅನಿಲ ತುಂಬಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಗರಬಾವಿಯ ಆಂಜನಪ್ಪ (48) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಸಾಯಿನಾಥ್ ಎಂಟರ್‌ಪ್ರೈಸಸ್ ಹೆಸರಿನ ಅಂಗಡಿ ಇಟ್ಟುಕೊಂಡಿದ್ದ ಆಂಜನಪ್ಪ, ನಾಗರಬಾವಿ ಸಮೀಪದ ಪೂರ್ಣಚಂದ್ರ ಡಿ ಗ್ರೂಪ್ ಬಡಾವಣೆಯ ಮನೆಯಲ್ಲಿ ಮತ್ತು ಮಾಗಡಿ ಮುಖ್ಯರಸ್ತೆ ಬಳಿಯ ಕಾವೇರಿಪುರದ ಗೋದಾಮಿನಲ್ಲಿ ಈ ದಂಧೆ ನಡೆಸುತ್ತಿದ್ದ.

ಆರೋಪಿಯು ಗೃಹೋಪಯೋಗಿ ಸಿಲಿಂಡರ್‌ಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಅಡುಗೆ ಅನಿಲ ತುಂಬಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನಿಂದ ರೂ 5 ಲಕ್ಷ ಮೌಲ್ಯದ 84 ಗ್ಯಾಸ್ ಸಿಲಿಂಡರ್ ಮತ್ತು ಆಟೊವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ವಿವೇಕನಗರ ಸಮೀಪದ ನೀಲಸಂದ್ರದಲ್ಲಿ ಇದೇ ರೀತಿ ಆಟೊ ಸಿಲಿಂಡರ್‌ಗಳಿಗೆ ಅಡುಗೆ ಅನಿಲ ತುಂಬಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ರೂ 2.25 ಲಕ್ಷ ಮೌಲ್ಯದ 40 ಸಿಲಿಂಡರ್ ಹಾಗೂ ಎರಡು ಸರಕು ಸಾಗಣೆ ಆಟೊಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮೀರ್ ಅಲಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT