ADVERTISEMENT

ಸಿ.ಸಿ.ಟಿ.ವಿ ಒಡೆದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಸಿ.ಸಿ.ಟಿ.ವಿ ಒಡೆದು ಕಳ್ಳತನ
ಸಿ.ಸಿ.ಟಿ.ವಿ ಒಡೆದು ಕಳ್ಳತನ   

ಬೆಂಗಳೂರು: ಕಳ್ಳಕಾಕರು, ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳ ಭಯದಿಂದಾಗಿ ಕೆಲವರು ಮನೆಗಳಲ್ಲಿ ಸಿ.ಸಿ.ಟಿ.ವಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ, ಆ ಕ್ಯಾಮೆರಾಗಳನ್ನೇ ಒಡೆದು ಹಾಕಿದ ಕಳ್ಳರು ಮನೆಯೊಂದರಿಂದ ನಗದು, ಚಿನ್ನಾಭರಣಗಳನ್ನು ಕದ್ದೊಯ್ದಿರುವ ಪ್ರಕರಣ ಜಯನಗರದಲ್ಲಿ ನಡೆದಿದೆ.

ಜಯನಗರದ 4ನೇ ಟಿ–ಬ್ಲಾಕ್‌ ನಿವಾಸಿ, ಸಿಕಂದರ್‌ ಮಿಯಾನ್‌ ಮನೆಯಲ್ಲಿ ಕಳ್ಳತನ ನಡೆದಿದೆ. ತಮ್ಮ ಕುಟುಂಬದೊಂದಿಗೆ ಅವರು ಇದೇ 15ರಂದು ಜಮ್ಮ ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಕನ್ನ ಹಾಕಿದ್ದಾರೆ.

ಸಿಕಂದರ್‌‌, ಪ್ರವಾಸಕ್ಕೆ ತೆರಳಿದ್ದರೂ ಸಿ.ಸಿ.ಟಿ.ವಿಗೆ ಅಂತರ್ಜಾಲದ ಸಂಪರ್ಕ ನೀಡಿ, ಅದರ ಮೂಲಕ ಮನೆಯ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು. ಆದರೆ, ಪ್ರವಾಸಕ್ಕೆ ತೆರಳಿದ ಐದು ದಿನಗಳ ಬಳಿಕ ಮನೆಯ ಯಾವುದೇ ದೃಶ್ಯಗಳನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. 22ರಂದು ಪ್ರವಾಸದಿಂದ ಮರಳಿದಾಗ, ಕಳ್ಳತನ ನಡೆದಿರುವುದು ಗೊತ್ತಾಗಿದೆ.

ADVERTISEMENT

ಈ ಬಗ್ಗೆ ಸಿಕಂದರ್‌, ತಿಲಕನಗರ ಠಾಣೆಗೆ ದೂರು ನೀಡಿದ್ದಾರೆ. ₹1.30 ಲಕ್ಷ ನಗದು, 15 ಗ್ರಾಂ ತೂಕದ ಮೂರು ಬಂಗಾರದ ಉಂಗುರ, 300 ಗ್ರಾಂ ತೂಕದ ಬೆಳ್ಳಿ ಸಾಮಾನು ಮತ್ತು ಎಂಟು ಬ್ರಾಂಡೆಡ್‌ ಗಡಿಯಾರಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ಯಾಸೇಜ್‌ ಮೂಲಕ ಮನೆಯ ಆವರಣ ಪ್ರವೇಶಿರುವ ಕಳ್ಳರು, ಹೊರಗಡೆ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಹಿಂದಿನ ಬಾಗಿಲು ಮುರಿದು, ಮನೆಯೊಳಗೆ ಪ್ರವೇಶಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ತಿಲಕ್‌ನಗರ ಠಾಣೆಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.