ADVERTISEMENT

ಸುಗಮ ಕಲಾಪಕ್ಕೆ ಸಹಕಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 19:15 IST
Last Updated 25 ಫೆಬ್ರುವರಿ 2011, 19:15 IST

ಬೆಂಗಳೂರು: ವಿಧಾನಸಭೆಯ ಕಲಾಪ ಸುಗಮವಾಗಿ ನಡೆಯಲು ಪೂರ್ಣ ಸಹಕಾರ ನೀಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ತಿಳಿಸಿದರು.

ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿಯ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕಲಾಪ ನಡೆಯಲು ಅವಕಾಶ ನೀಡುತ್ತೇವೆ. ಕಳೆದ ಅಧಿವೇಶನದಲ್ಲಿ ಚರ್ಚೆಯಾಗದ ಕೆಲವು ವಿಚಾರಗಳಿದ್ದು, ಅವುಗಳ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್ ಒಪ್ಪಿದ್ದಾರೆ’ ಎಂದರು. ನಿಲುವಳಿ ಸೂಚನೆಯಲ್ಲದೆ, ನಿಯಮ 69ರಡಿ ಸರ್ಕಾರದ ಭೂಹಗರಣಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಸಭೆ ನಂತರ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಲು ಒಪ್ಪಿವೆ ಎಂದರು.

ಕಾಂಗ್ರೆಸ್‌ನ ಮುಖ್ಯ ಸಚೇತಕ ಅಭಯಚಂದ್ರ ಜೈನ್ ಅವರಿಗೆ ಇದುವರೆಗೂ ವಿಧಾನಸೌಧದಲ್ಲಿ ಕೊಠಡಿ ನೀಡದಿರುವ ಬಗ್ಗೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಮುಖ್ಯಮಂತ್ರಿ ಕಚೇರಿ ಮುಂದೆ ಧರಣಿ ನಡೆಸುವ ಬೆದರಿಕೆ ಹಾಕಿದರು ಎನ್ನಲಾಗಿದೆ. ಮುಖ್ಯಮಂತ್ರಿಯವರು ಇದಕ್ಕೆ ತಕ್ಷಣ ಸ್ಪಂದಿಸಿ, ಕೊಠಡಿ ನೀಡುವ ಭರವಸೆ ನೀಡಿದರು.

ಶಾಸಕರ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳಿದ್ದು, ಅವುಗಳನ್ನು ಆದಷ್ಟು ಬೇಗ ನಿವಾರಿಸಲಾಗುವುದು. ಕೆಡಿಪಿ ಸೇರಿದಂತೆ ಇತರ ಸಭೆಗಳಲ್ಲಿ ಯಾರೆಲ್ಲ ಭಾಗವಹಿಸಬೇಕು? ನಿಗಮ- ಮಂಡಳಿಗಳ ಅಧ್ಯಕ್ಷರು ಕೂಡ ಸಭೆಗೆ ಬರುತ್ತಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದೂ ಪ್ರತಿಪಕ್ಷಗಳ ಮುಖಂಡರು ಪ್ರಶ್ನಿಸಿದ್ದಾರೆ. ಜೆಡಿಎಸ್‌ನ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.