
ಬೆಂಗಳೂರು: ಫಾರ್ಮ್‌ಲ್ಯಾಂಡ್ ರೇನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಸಂಸ್ಥೆಯು ಬತ್ತಿ ಹೋಗಿರುವ ಕೊಳವೆಬಾವಿಗಳ ಪುನಃಶ್ಚೇತನಕ್ಕಾಗಿ ಸುಧಾರಿತ ತಂತ್ರಜ್ಞಾನ ಆಧಾರಿತ ಮಳೆ ನೀರು ಸಂಗ್ರಹಣೆ ಯೋಜನೆಯನ್ನು ಪರಿಚಯಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ‘ಸುಧಾರಿತ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನದ ಮೂಲಕ ಒಂದು ವರ್ಷದಲ್ಲಾಗುವ 70 ದಿನಗಳ ಮಳೆಯ ನೀರಿನಲ್ಲಿ ಕನಿಷ್ಠ 2.1 ದಶಲಕ್ಷ ಲೀಟರ್‌ನಿಂದ 4 ದಶಲಕ್ಷ ಲೀಟರ್ ನೀರನ್ನು ಅಂತರ್ಜಲಕ್ಕೆ ಸೇರಿಸಬಹುದು’ ಎಂದು ಹೇಳಿದರು.
‘ಇದರಿಂದ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ನೀರನ್ನು ಪುನಃಶ್ಚೇತನಗೊಳಿಸಬಹುದಾಗಿದ್ದು, ಬರಪೀಡಿತ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ’ ಎಂದರು.
‘ಮಳೆನೀರು ಶುದ್ಧೀಕರಿಸುವ ವ್ಯವಸ್ಥೆಯನ್ನೂ ಈ ಯೋಜನೆ ಹೊಂದಿದ್ದು ಕುಡಿಯಲು ಸಹ ಬಳಸಬಹುದಾಗಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗದ ಭಾಗಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ’ ಎಂದು ಹೇಳಿದರು.
‘ಕೆಲವರಿಗೆ ಈ ಮಳೆ ನೀರು ಸಂಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ ಎಂಬ ಕಾರಣದಿಂದಾಗಿ ಈ ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಅರ್ಧ ಸೈಟು ಪ್ರದೇಶಕ್ಕೆ ₨ 12ರಿಂದ 13 ಸಾವಿರ, 30x40 ಚದರಡಿಗೆ ₨ 18ರಿಂದ 20 ಸಾವಿರ ಹಾಗೂ 40x60ಚದರಡಿಗೆ ₨ 30ರಿಂದ 35 ಸಾವಿರ ಖರ್ಚಾಗಲಿದೆ. ಒಂದು ಬಾರಿ ಖರ್ಚು ಮಾಡಿದರೆ ಹಲವಾರು ವರ್ಷಗಳು ಬಳಸಬಹುದು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.