ADVERTISEMENT

ಸುಲಿಗೆಯಿಂದಲೇ ಶತಕೋಟಿ ಗಳಿಸಿದ ಮಾಜಿ ಎಸ್‌ಐ!

ಕೊನೆಗೂ ಸಿಸಿಬಿ ಬಲೆಗೆ ಬಿತ್ತು ಸೋದರರ ಗ್ಯಾಂಗ್ l ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸೇವೆಯಿಂದ ವಜಾಗೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಅಶೋಕ್
ಅಶೋಕ್   

ಬೆಂಗಳೂರು: ಮೂರು ದಶಕಗಳಿಂದ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತ ನೂರು ಕೋಟಿಗೂ ಅಧಿಕ ಮೊತ್ತದ ಆಸ್ತಿ ಸಂಪಾದಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮಾಜಿ ಸಬ್‌ ಇನ್‌ಸ್ಪೆಕ್ಟರ್ ಹಾಗೂ ಆತನ ಇಬ್ಬರು ಸೋದರರು ಈಗ ಸಿಸಿಬಿ ಪೊಲೀಸರ ಅತಿಥಿಗಳಾಗಿದ್ದಾರೆ.

‘ಡಾಲರ್ಸ್ ಕಾಲೋನಿಯ ಚಂದ್ರಶೇಖರ್ ಅಲಿಯಾಸ್ ಚಲ್ಲಘಟ್ಟ ಚಂದ್ರ, ಆತನ ತಮ್ಮಂದಿರಾದ ಮಂಜುನಾಥ ಅಲಿಯಾಸ್ ಬಾಕ್ಸರ್ ಹಾಗೂ ಅಶೋಕ್‌ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಈ ಸೋದರರು ಅಪರಾಧ ಕೃತ್ಯಗಳಿಂದಲೇ  100 ಕೋಟಿಗೂ ಅಧಿಕ ಮೊತ್ತದ ಆಸ್ತಿ ಗಳಿಸಿರುವುದು ವಿಚಾರಣೆಯಿಂದ ಬಯಲಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹತ್ತು ವರ್ಷಗಳ ಹಿಂದೆ ತನ್ನ ವಿರುದ್ಧ ದಾಖಲಾಗಿದ್ದ ಡಕಾಯಿತಿ ಯತ್ನ ಪ್ರಕರಣದಲ್ಲಿ ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಚಂದ್ರನನ್ನು ನ್ಯಾಯಾಲಯ ಘೋಷಿತ ಅಪರಾಧಿ (ಪ್ರೊಕ್ಲೈಮ್ಡ್ ಅಫೆಂಡರ್) ಎಂದು ಪ್ರಕಟಿಸಿತ್ತು. ಹೀಗಾಗಿ, ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದೆವು. ಬಾತ್ಮೀದಾರರು ನೀಡಿದ ಸುಳಿವಿನಿಂದ ಶುಕ್ರವಾರ ಸಂಜೆ ಸಂಜಯನಗರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದೆವು’ ಎಂದು ಹೇಳಿದರು.

ADVERTISEMENT

ಕರ್ತವ್ಯದಲ್ಲಿದ್ದಾಗಲೂ ಕೃತ್ಯ!: ‘1987ರಲ್ಲಿ ಎಎಸ್‌ಐ ಆಗಿ ದೆಹಲಿ ಸಿಐಎಸ್‍ಎಫ್‌ ಸೇರಿದ್ದ ಚಂದ್ರನಿಗೆ 4 ವರ್ಷಗಳಲ್ಲೇ ಎಸ್‌ಐ ಹುದ್ದೆಗೆ ಬಡ್ತಿ ಸಿಕ್ಕಿತ್ತು. ಅನಾರೋಗ್ಯದ ನೆಪದಲ್ಲಿ ಸುದೀರ್ಘ ರಜೆ ಪಡೆದು ವರ್ಷಕ್ಕೆ 2–3 ಬಾರಿ ಬೆಂಗಳೂರಿಗೆ ಬರುತ್ತಿದ್ದ ಈತ, ಸೋದರರು ಹಾಗೂ ಸ್ನೇಹಿತರನ್ನು ಸೇರಿಸಿಕೊಂಡು ಡಕಾಯಿತಿ ಗ್ಯಾಂಗ್ ಕಟ್ಟಿದ್ದ. ಆಗಿನಿಂದಲೂ ಹೆದ್ದಾರಿಗಳಲ್ಲಿ ವಾಹನ ತಡೆದು ಸುಲಿಗೆ ಮಾಡುತ್ತಿದ್ದ ಈತ, ದೋಚಿದ ಹಣ–ಒಡವೆಗಳೊಂದಿಗೆ ದೆಹಲಿಗೆ ಹಿಂದಿರುಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಹೀಗೆ, 14 ವರ್ಷ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಚಂದ್ರ, ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದಾಗೆಲ್ಲ ಸುಳ್ಳು ವೈದ್ಯಕೀಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸುತ್ತಿದ್ದ. ಈಬಗ್ಗೆ  ಅನುಮಾನಗೊಂಡ ಅಧಿಕಾರಿಗಳು, ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ಆಗ ಆತ ಖೊಟ್ಟಿ ದಾಖಲೆ ಸಲ್ಲಿಸಿ ರಜೆ ಪಡೆಯುತ್ತಿದ್ದ ಸಂಗತಿ ಬಯಲಾಗಿತ್ತು. ಹೀಗಾಗಿ, 2011ರಲ್ಲಿ ಚಂದ್ರನನ್ನು ಸೇವೆಯಿಂದ ವಜಾಗೊಳಿಸಿದ್ದರು.’

ವೃತ್ತಿಪರ ಕ್ರಿಮಿನಲ್ ಆದ: ‘ಸರ್ಕಾರಿ ಕೆಲಸ ಕಳೆದುಕೊಂಡ ಬಳಿಕ ವೃತ್ತಿಪರ ಕ್ರಿಮಿನಲ್ ಆಗಿ ಪ್ರವರ್ಧಮಾನಕ್ಕೆ ಬಂದ ಚಂದ್ರ, ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಪ್ರಾರಂಭಿಸಿದ್ದ. ತನ್ನ ಡಕಾಯಿತಿ ಗ್ಯಾಂಗ್ ಬಳಸಿಕೊಂಡೇ, ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿ ಭೂಮಿ ಕಬಳಿಸುತ್ತಿದ್ದ. ಕೊಲೆ ಯತ್ನ, ಡಕಾಯಿತಿ ಹಾಗೂ ಸುಲಿಗೆ ಆರೋಪಗಳಡಿ ಆತನ ವಿರುದ್ಧ ಎಚ್‌ಎಎಲ್, ಎಲೆಕ್ಟ್ರಾನಿಕ್‌ಸಿಟಿ, ಚನ್ನಪಟ್ಟಣ ಗ್ರಾಮಾಂತರ ಠಾಣೆಗಳು ಹಾಗೂ ಸಿಸಿಬಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಮಾಹಿತಿ ನೀಡಿದರು.

ರೌಡಿಪಟ್ಟಿ ಏಕಿಲ್ಲ?: ‘30 ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರೂ ಚಂದ್ರನ ವಿರುದ್ಧ ಯಾವುದೇ ಪೊಲೀಸ್ ಠಾಣೆಯಲ್ಲೂ ರೌಡಿಪಟ್ಟಿ ತೆರೆಯದಿರುವುದು ಅನುಮಾನ ಮೂಡಿಸುತ್ತದೆ’ ಎಂದಿದ್ದಾರೆ ಸಿಸಿಬಿ ಅಧಿಕಾರಿಗಳು.

‘ರೌಡಿಪಟ್ಟಿಯಲ್ಲಿ ಚಂದ್ರನ ಹೆಸರಿದ್ದಿದ್ದರೆ, ಆತನ ಚಲನವಲನಗಳ ಮೇಲೆ ನಿಗಾ ಇಡಬಹುದಿತ್ತು. ಆಗಾಗ್ಗೆ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರೆ, ಆತನ ಉಪಟಳಕ್ಕೂ ಕಡಿವಾಣ ಬೀಳುತ್ತಿತ್ತು.’

‘ಸೋದರರ ಹೆಸರುಗಳನ್ನು  ರೌಡಿಪಟ್ಟಿಯಲ್ಲಿ ಸೇರಿಸಿರುವ ಜೀವನ್‌ಬಿಮಾನಗರ ಠಾಣೆಯ ಪೊಲೀಸರು, ಚಂದ್ರನಿಗೆ ರಾಜಕಾರಣಿಗಳ ಬೆಂಬಲವಿದೆ ಎಂಬ ಕಾರಣಕ್ಕೆ ಆತನನ್ನು ರೌಡಿಪಟ್ಟಿಯಿಂದ ಹೊರಗಿಟ್ಟಿದ್ದಾರೆ’ ಎಂದು ಹೇಳಿದರು.

***

ಜಾರ್ಜ್ ವಿರುದ್ಧ ಸಮರ ಸಾರಿದ್ದ
‘ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಚಂದ್ರ, 2018ರ ವಿಧಾನಸಭಾ ಚುನಾವಣೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಸರ್ವಜ್ಞನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಕಸರತ್ತು ನಡೆಸುತ್ತಿದ್ದ ಸಂಗತಿ ತನಿಖೆಯಿಂದ ಬಯಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ನನ್ನ ರಾಜಕೀಯ ಭವಿಷ್ಯ ಹಾಳು ಮಾಡಬೇಡಿ ಸಾರ್. ಬೇಕಿದ್ದರೆ, ನಿಮಗೆ ₹ 50 ಲಕ್ಷ ಕೊಡುತ್ತೇನೆ. ಈಗಾಗಲೇ ರಾಷ್ಟ್ರೀಯ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ನೀಡುವುದಾಗಿ ಭರವಸೆ ಕೊಟ್ಟಿದೆ. ಜಾರ್ಜ್ ಅವರನ್ನು ಸೋಲಿಸಲು ನನ್ನ ಶತಕೋಟಿ ಆಸ್ತಿಯನ್ನು ವ್ಯಯಿಸುವುದಕ್ಕೂ ಸಿದ್ಧನಿದ್ದೇನೆ’ ಎಂದು ಆತ ಬೇಡಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

***

‘ಚಲ್ಲಘಟ್ಟ ಚಂದ್ರ’ನಾಗಿದ್ದು ಹೀಗೆ?
ಚಂದ್ರ ತನ್ನ ಬಾಲ್ಯವನ್ನು ಕಳೆದದ್ದು ಬಿ.ನಾಗಸಂದ್ರದಲ್ಲಿ. ಅದರ ಪಕ್ಕದ ಊರಾದ ಚಲ್ಲಘಟ್ಟದಲ್ಲಿ 70ರ ದಶಕದಲ್ಲಿ ಚಂದ್ರಪ್ಪ ಎಂಬ ಕುಖ್ಯಾತ ರೌಡಿ ಇದ್ದ. ಆತನ ರೌಡಿ ಚಟುವಟಿಕೆಗಳಿಂದ ಪ್ರಭಾವಿತನಾಗಿದ್ದ ಚಂದ್ರ, ‘ಚಲ್ಲಘಟ್ಟ ಚಂದ್ರ’ನಂತೆಯೇ ತಾನೂ ದೊಡ್ಡ ರೌಡಿಯಾಗಬೇಕೆಂಬ ಕನಸು ಕಂಡಿದ್ದ.

ಸಿಐಎಸ್‌ಎಫ್ ಎಸ್‌ಐ ಆದರೂ ಸ್ಥಳೀಯರು ಆತನನ್ನು ಚಲ್ಲಘಟ್ಟ ಚಂದ್ರ ಎಂದೇ ಕರೆಯುತ್ತಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

***

ಚಂದ್ರ ಹಾಗೂ ಆತನ ಸೋದರರು ನಗರದಲ್ಲಿ 10 ಮನೆಗಳು ಹಾಗೂ 95 ನಿವೇಶನಗಳನ್ನು ಹೊಂದಿದ್ದಾರೆ. ಈಗ ಡಾಲರ್ಸ್ ಕಾಲೊನಿಯಲ್ಲಿರುವ ಆತನ ಮನೆಯ ಮೌಲ್ಯ ₹ 4.5 ಕೋಟಿ
ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.