ADVERTISEMENT

ಸುಸ್ಥಿರ ವಾಣಿಜ್ಯೋದ್ಯಮಕ್ಕೆ ಐಐಎಸ್‌ಇ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 19:15 IST
Last Updated 16 ಜೂನ್ 2012, 19:15 IST

ಬೆಂಗಳೂರು: ಪರಿಸರ ಸ್ನೇಹಿಯಾದ ಸುಸ್ಥಿರ ವಾಣಿಜ್ಯೋದ್ಯಮ ಅಭಿವೃದ್ಧಿ ವಿಷಯದಲ್ಲಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ `ಇಂಡಿಯನ್ ಇನ್ಸ್‌ಟಿಟ್ಯೂಟ್ ಫಾರ್ ಸಸ್ಟೇನಬಲ್ ಎಂಟರ್‌ಪ್ರೈಸ್~ (ಐಐಎಸ್‌ಇ) ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ.ಪ್ರೇಮಚಂದ್ರ ಸಾಗರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಐಐಎಸ್‌ಇ ಸ್ನಾತಕೋತ್ತರ ಪ್ರಮಾಣಪತ್ರ ಕೋರ್ಸು ಆಗಸ್ಟ್ 13ರಿಂದ ಪ್ರಾರಂಭವಾಗಲಿದೆ~ ಎಂದರು.
`ಕನಕಪುರ ರಸ್ತೆಯಲ್ಲಿರುವ ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆಯ ಎರಡನೇ ಕ್ಯಾಂಪಸ್‌ನಲ್ಲಿ ಐಐಎಸ್‌ಇ ಕಾರ್ಯಾರಂಭ ಮಾಡಲಿದೆ.

ಕೋರ್ಸಿನ ಅವಧಿ ಒಂದು ವರ್ಷ. ಅದರಲ್ಲಿ ನಾಲ್ಕು ವಾರಗಳ ಕಾಲ ಕ್ಯಾಂಪಸ್‌ನಲ್ಲಿ ತರಗತಿಗಳಿರುತ್ತವೆ. ಉಳಿದಂತೆ ಆಯಾ ಅಭ್ಯರ್ಥಿಯು ಇರುವಲ್ಲಿಯೇ ಕ್ಷೇತ್ರ ಅಧ್ಯಯನ ಮಾಡಬೇಕಾಗುತ್ತದೆ. ವಾರ್ಷಿಕ ಶುಲ್ಕ ರೂ. 4 ಲಕ್ಷ~ ಎಂದು ಅವರು ವಿವರಿಸಿದರು.

ಇಂಗರ್‌ಸಾಲ್ ರ‌್ಯಾಂಡ್ ಕಂಪೆನಿಯು ಐಐಎಸ್‌ಇ ಸ್ಥಾಪಕ ಸದಸ್ಯ ಕಂಪೆನಿಯಾಗಿ ಮತ್ತು ಸ್ವಯಂ ಸೇವಾ ಸಂಸ್ಥೆಯಾದ (ಎನ್‌ಜಿಒ) `ಅಶೋಕ~, ಪಾಲುದಾರ ಎನ್‌ಜಿಒ ಆಗಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು.
ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕೆ.ಜೈರಾಜ್, ಅಮೆರಿಕದ ಬೇಕ್‌ಮನ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಸಂಸ್ಥೆಯ ಸಹ ಸ್ಥಾಪಕರಾದ ಶೇಖರ್ ನರಸಿಂಹನ್ ಮೊದಲಾದವರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.