ADVERTISEMENT

ಸೇವೆಯಿಂದ ಬಿಎಸ್‌ಎನ್‌ಎಲ್ ಕಾರ್ಮಿಕರ ವಜಾ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಬೆಂಗಳೂರು: `ಕನಿಷ್ಠ ವೇತನ ಕೇಳಿದ್ದಕ್ಕೆ ಗುತ್ತಿಗೆ ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಲಾಗಿದೆ~ ಎಂದು ಆರೋಪಿಸಿ ರಾಜ್ಯ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಆನಂದ್‌ರಾವ್ ವೃತ್ತ ಬಳಿಯ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

`ಬಹುತೇಕ ಕಾರ್ಮಿಕರು ಬಿಎಸ್‌ಎನ್‌ಎಲ್ ಸಂಸ್ಥೆಯ ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ದೂರವಾಣಿ ಕೇಂದ್ರಗಳಲ್ಲಿ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನವಾಗಲಿ, ಕೆಲಸದಲ್ಲಿ ಸೂಕ್ತ ಭದ್ರತೆಯಾಗಲಿ ಅವರಿಗೆ ಸಿಕ್ಕಿಲ್ಲ. ಈ ಬಗ್ಗೆ ಸಂಸ್ಥೆಯನ್ನು ಪ್ರಶ್ನಿಸಿದ್ದಕ್ಕೆ ಟೆಂಡರ್ ಮುಗಿದಿದೆ ನೀವಿನ್ನೂ ಕೆಲಸಕ್ಕೆ ಬರುವುದು ಬೇಡ ಎಂದು ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಿದೆ. ಕೆಲಸ ಕಳೆದುಕೊಂಡ ಕಾರ್ಮಿಕರ ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಿವೆ~ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಚೆಲುವರಾಜು ಹೇಳಿದರು.

`ಕಾನೂನುಬದ್ಧವಾಗಿ ನೀಡಬೇಕಾದ ಇಎಸ್‌ಐ, ಭವಿಷ್ಯ ನಿಧಿ, ವೇತನ ಚೀಟಿ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಅಲ್ಲದೇ, ನಾವು ಈ ಸಂಸ್ಥೆಯ ನೌಕರರೆಂದು ಹೇಳಿಕೊಳ್ಳಲು ಗುರುತಿನ ಚೀಟಿಯನ್ನೂ ಸಹ ನೀಡಿಲ್ಲ. ಇತ್ತೀಚೆಗೆ ನಮ್ಮ ಸಮಸ್ಯೆಗಳನ್ನು ಪರಿಶೀಲಿಸಿದ್ದ ಕಾರ್ಮಿಕ ಇಲಾಖೆ ಆಯುಕ್ತರು, ನೌಕರರಿಗೆ ಭದ್ರತೆ ನೀಡುವಂತೆ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಆಡಳಿತ ಮಂಡಳಿ ನಮ್ಮನ್ನು ಸೇವೆಯಿಂದ ವಜಾ ಮಾಡಿದೆ~ ಎಂದು ಪ್ರತಿಭಟನಾನಿರತ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಮ್ಮನ್ನೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಜುಲೈ.16 ರಂದೇ ಸಂಸ್ಥೆಗೆ ಮನವಿ ಮಾಡಿದ್ದೇವೆ. ಆದರೆ, ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾನವೀಯತೆ ದೃಷ್ಟಿಯಿಂದಾದರೂ ನಮ್ಮ ಸಮಸ್ಯೆಗಳಿಗೆ ಆಡಳಿತ ಮಂಡಳಿ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.