ADVERTISEMENT

ಸೈಕಲ್‌ಗೆ ಟ್ರ್ಯಾಕ್ಟರ್ ಡಿಕ್ಕಿ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಬೆಂಗಳೂರು: ನಗರದ ವಿಮಾನ ನಿಲ್ದಾಣ, ಯಲಹಂಕ ಹಾಗೂ ಫೇಜರ್‌ಟೌನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಮಾನ ನಿಲ್ದಾಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.

ದೇವರಬಿಸನಹಳ್ಳಿ ನಿವಾಸಿ ನರಸಿಂಹಯ್ಯ ಅವರ ಪುತ್ರ ವರುಣ್ (13) ಮೃತಪಟ್ಟವನು. ಎಚ್‌ಎಸ್‌ಆರ್ ಲೇಔಟ್‌ನ ಸರ್ಕಾರಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವರುಣ್ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಇದೇ ವೇಳೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಳಗೆ ಬಿದ್ದ ವರುಣ್ ಮೇಲೆ ಅದೇ ವಾಹನದ ಹಿಂದಿನ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದನು ಎಂದು ಪೊಲೀಸರು ಹೇಳಿದರು.

ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದು ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದರು. ವಿಮಾನ ನಿಲ್ದಾಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಡಿಕ್ಕಿ-ಯುವಕ ಸಾವು: ರಸ್ತೆ ದಾಟುತ್ತಿದ್ದ ಯುವಕರೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.
ರಾಜಸ್ಥಾನ ಮೂಲದ ರಾಜಾರಾಮ್ ಅವರ ಪುತ್ರ ದಿನೇಶ್ ಕುಮಾರ್ ಕಿಪ್ನರಾಮ್ (24) ಮೃತಪಟ್ಟವರು.

ವ್ಯಾಪಾರಿಯಾಗಿದ್ದ ಅವರು ಯಲಹಂಕದಲ್ಲಿ ವಾಸಿಸುತ್ತಿದ್ದರು. ರಾತ್ರಿ 7.30ರ ಸುಮಾರಿಗೆ ಸಂತೆ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಅವರಿಗೆ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.

ಬಸ್ ಚಾಲಕ ರುದ್ರಪ್ಪನನ್ನು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಯಲಹಂಕ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದರು.

ಮತ್ತೊಂದು ಪ್ರಕರಣ:
ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಫೇಜರ್‌ಟೌನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಕಾಡಗೊಂಡನಹಳ್ಳಿ ನಿವಾಸಿ ಮೋಹಿಸಿನ್ ಖಾನ್(28) ಮೃತಪಟ್ಟವರು. ಖಾಸಗಿ ಕಂಪೆನಿಯಯಲ್ಲಿ ಕೆಲಸ ಮಾಡುತ್ತಿದ್ದ ಅವರು ಸಂಜೆ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ತನ್ನ ಅಣ್ಣ ವಾಸೀಂ ಖಾನ್‌ರಿಂದ ಬೈಕ್ ತೆಗೆದುಕೊಂಡು ಹೋಗಿದ್ದರು.

ಟ್ಯಾನರಿ ರಸ್ತೆಯಲ್ಲಿರುವ ವೆಂಕಟೇಶ್ವರ ಬಸ್ ನಿಲ್ದಾಣದ ಬಳಿ ಹೋಗುವಾಗ ರಾತ್ರಿ 7.30ರ ಸುಮಾರಿಗೆ ಬಿಎಂಟಿಸಿ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದರು.

ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ 10 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದರು. ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಫೇಜರ್‌ಟೌನ್ ಸಂಚಾರ ಠಾಣೆ ಪೊಲೀಸರು ಹೇಳಿದರು.

ಅಗ್ನಿ ಅನಾಹುತ-ಇಬ್ಬರಿಗೆ ಗಾಯ:

ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಜೀವನ್‌ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಚಿಕ್ಕಸಂದ್ರದ ನಿವಾಸಿ ಸರೋಜಮ್ಮ ಹಾಗೂ ಅವರ ಸೊಸೆ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿಲ ಸೋರಿಕೆಯಾಗಿರುವುದನ್ನು ತಿಳಿಯದ ಸರೋಜಮ್ಮ ಬೆಳಿಗ್ಗೆ ಕಾಫಿ ಮಾಡಲು ಸ್ಟೌಗೆ ಬೆಂಕಿ ಹೊತ್ತಿಸಿದಾಗ ಅನಾಹುತ ಸಂಭವಿಸಿದೆ.

ಘಟನೆಯಲ್ಲಿ ಸರೋಜಮ್ಮ ಅವರ ಮುಖ ಹಾಗೂ ಬಲಭುಜಕ್ಕೆ ಸುಟ್ಟ ಗಾಯಗಳಾಗಿವೆ. ಅವರ ಸೊಸೆಗೂ ಕೂಡ ಗಾಯಗಳಾಗಿದ್ದು, ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಜೀವನ್‌ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.