ADVERTISEMENT

ಸ್ಥಳ ಪರಿಶೀಲನೆ ನಡೆಸಿದ ಸಿ.ಎಂ

ಬಂಡವಾಳ ಹೂಡಿಕೆದಾರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 20:17 IST
Last Updated 27 ಜನವರಿ 2016, 20:17 IST
ಹೂಡಿಕೆದಾರರ ಸಮಾವೇಶದ ಸಿದ್ಧತೆ ಪರಿಶೀಲಿಸಲು ಬುಧವಾರ ಅರಮನೆ ಮೈದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಕ್ಷಣ. ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್‌. ರೋಷನ್‌ ಬೇಗ್‌, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಕೈಗಾರಿಕೆ ಇಲಾಖೆ ಆಯುಕ್ತ ಗೌರವ್‌ ಗುಪ್ತಾ ಇದ್ದರು
ಹೂಡಿಕೆದಾರರ ಸಮಾವೇಶದ ಸಿದ್ಧತೆ ಪರಿಶೀಲಿಸಲು ಬುಧವಾರ ಅರಮನೆ ಮೈದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಕ್ಷಣ. ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್‌. ರೋಷನ್‌ ಬೇಗ್‌, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಕೈಗಾರಿಕೆ ಇಲಾಖೆ ಆಯುಕ್ತ ಗೌರವ್‌ ಗುಪ್ತಾ ಇದ್ದರು   

ಬೆಂಗಳೂರು: ಅರಮನೆ ಮೈದಾನದಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ‘ಇನ್‌ವೆಸ್ಟ್‌ ಕರ್ನಾಟಕ–2016’ರ ಪೂರ್ವ ಸಿದ್ಧತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಖುದ್ದಾಗಿ ಪರಿಶೀಲಿಸಿದರು.

ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಅವರು, ಸಭಾ ಕಾರ್ಯಕ್ರಮ ನಡೆಯುವ ಸ್ಥಳ, ಪ್ರದರ್ಶನ ಮಳಿಗೆಗಳಿಗೆ ಮೀಸಲಿಟ್ಟಿರುವ  ಜಾಗ, ಉಪನ್ಯಾಸ ನಡೆಯಲಿರುವ ಸಭಾಂಗಣಗಳಿಗೆ ತೆರಳಿ ಕಾರ್ಯಕ್ರಮದ ರೂಪುರೇಷೆಗಳ ಮಾಹಿತಿ ಪಡೆದರು.

ಫೆಬ್ರುವರಿಯಲ್ಲಿ ನಡೆಯಲಿರುವ ಉಪ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆ ಮಾಡಬೇಕಾಗಿರುವುದರಿಂದ ಮತ್ತು ಬಜೆಟ್‌ ಪೂರ್ವತಯಾರಿಗೂ ಗಮನಕೊಡಬೇಕಾಗಿರುವುದರಿಂದ ಸಮಾವೇಶವನ್ನು ಮಾರ್ಚ್‌ ತಿಂಗಳಲ್ಲಿ ಆಯೋಜಿಸಿದರೆ ಚೆನ್ನಾಗಿರುತ್ತಿತ್ತು ಎಂದು ಸಿದ್ದರಾಮಯ್ಯ ಅವರು ದೇಶಪಾಂಡೆ ಅವರಿಗೆ ತಿಳಿಸಿದರು.

ಸಮಾವೇಶಕ್ಕೆ ಭದ್ರತೆ ಒದಗಿಸಲು ಕೈಗೊಂಡಿರುವ ಕ್ರಮ, ಅತಿಥಿಗಳಿಗೆ ಆಸನ ವ್ಯವಸ್ಥೆ ಮತ್ತು ಅರಮನೆ ಮೈದಾನದ ಸುತ್ತ ವಾಹನಗಳ ಸಂಚಾರ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್‌ ಎಂ.ಎ ಸಲೀಂ ಮುಖ್ಯಮಂತ್ರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ‘ ಹೂಡಿಕೆ ಒಂದು ನಿರಂತರ ಪ್ರಕ್ರಿಯೆ. ಈ ಸಮಾವೇಶದ ಮೂಲಕ ರಾಜ್ಯದ ಶಕ್ತಿ, ಕೈಗಾರಿಕಾ ನೀತಿ, ಅನುಕೂಲತೆಗಳು ಇತರರಿಗೂ ತಿಳಿಯಲಿದೆ’ ಎಂದರು.
*
ಹೂಡಿಕೆದಾರರ ಸಮಾವೇಶದ ಸಿದ್ಧತೆ ಅಂತಿಮ ಹಂತದಲ್ಲಿದೆ. ಫೆ.1ರ ಒಳಗಾಗಿ ಎಲ್ಲ ಕೆಲಸಗಳೂ ಪೂರ್ಣಗೊಳ್ಳಲಿವೆ.
- ಆರ್‌.ವಿ. ದೇಶಪಾಂಡೆ,  
ಬೃಹತ್‌ ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.