ಬೆಂಗಳೂರು: ‘ತಮ್ಮ ಮೇಲೆ ನಡೆಯುವ ದೌರ್ಜನ್ಯದಿಂದ ರಕ್ಷಿಸಿ ಕೊಳ್ಳಲು ಮಹಿಳೆಯರು ಸ್ವಯಂ ರಕ್ಷಣಾ ವಿದ್ಯೆಗಳನ್ನು ಕಲಿತುಕೊಳ್ಳಬೇಕು’ ಎಂದು ಕೇಂದ್ರ ಯುವಜನ ಅಭಿವೃದ್ಧಿ ಸಚಿವಾಲಯದ ಪ್ರಾದೇಶಿಕ ಸಮೀಕ್ಷೆ ಉಪ ಸಮಿತಿಯ ಅಧ್ಯಕ್ಷೆ ಡಾ. ಶ್ಯಾಲಿ ಎನ್. ಪೀಟರ್ ಕರೆ ನೀಡಿದರು.
ನಗರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಮಹಿಳೆಯರ ಸಬಲೀಕರಣ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುವತಿಯರು ಕರಾಟೆ, ಕುಸ್ತಿಯಂತಹ ಕ್ರೀಡಾ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು’ ಎಂದು ಹೇಳಿದ ಅವರು, ‘ಮಹಿಳೆಯರ ಮೇಲೆ ಪ್ರತಿನಿತ್ಯ ನಡೆಯತ್ತಿರುವ ಅತ್ಯಾಚಾರ ಪ್ರಕರಣ, ವರದಕ್ಷಿಣೆ ಕಿರುಕುಳ ಮತ್ತು ಬಾಲ್ಯ ವಿವಾಹ ದಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಮತ್ತಷ್ಟು ಕಠಿಣ ಕಾನೂನು ಗಳನ್ನು ಜಾರಿಗೆ ತರಬೇಕು’ ಎಂದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿನಿಯರಿಗೆ ‘ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.