ADVERTISEMENT

ಹತ್ತಿರದ ಪ್ರಯಾಣಕ್ಕೆ ಹೆಚ್ಚಿನ ದರ ಬಲ್ಲಿರಾ?

ಕೆಎಸ್‌ಆರ್‌ಟಿಸಿಯಿಂದ ಹೊಸ ‘ಪ್ರಯೋಗ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:46 IST
Last Updated 7 ಜನವರಿ 2014, 19:46 IST

ಬೆಂಗಳೂರು: ಪ್ರಯಾಣ ಸ್ಥಳ ದೂರವಾದಂತೆ ಪ್ರಯಾಣ ದರ ಹೆಚ್ಚುವುದು ಸಹಜ. ಪ್ರಯಾಣ ಸ್ಥಳ ಹತ್ತಿರವಾದಂತೆ ದರ ಹೆಚ್ಚುವುದು ಬಲ್ಲಿರಾ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  (ಕೆಎಸ್‌ಆರ್‌ಟಿಸಿ) ಇಂತಹ­ದೊಂದು ‘ಪ್ರಯೋಗ’ ನಡೆಸಿದೆ! ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗುವ ಪ್ರಯಾಣಿಕರು ಹತ್ತಿರದ ಪ್ರಯಾಣಕ್ಕೆ ದುಬಾರಿ ದರ ತೆರಬೇಕಿದೆ.

ಸಂಸ್ಥೆಯ ಎ.ಸಿ ಸ್ಲೀಪರ್‌ ಬಸ್‌ನಲ್ಲಿ ಇದೇ 17ರಂದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಬೆಂಗಳೂರಿಗೆ ಬರಲು ಪ್ರಯಾಣಿಕರೊಬ್ಬರು ಸೋಮವಾರ ಮುಂಗಡ ಬುಕ್ಕಿಂಗ್‌ ಮಾಡಿದರು. ಇಬ್ಬರ ಟಿಕೆಟ್‌ ದರ ₨1446 (ಒಬ್ಬರಿಗೆ ₨723). ಅದೇ ಪ್ರಯಾಣಿಕರು ಅದೇ ದಿನ ಅದೇ ಹೊತ್ತಿನಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಿಂದ ಬೆಂಗಳೂರಿಗೆ ಬರಲು ಮುಂಗಡ ಬುಕ್ಕಿಂಗ್‌ ಮಾಡಿದರು. ಇಬ್ಬರ ಟಿಕೆಟ್‌ ದರ ₨1517 (ಒಬ್ಬರಿಗೆ ₨758.50). ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುವವರು ಸಾಲಿಗ್ರಾಮ ದಾಟಿಯೇ ಕುಂದಾಪುರಕ್ಕೆ ಸಾಗಬೇಕಿದೆ. ಕುಂದಾಪುರ ಹಾಗೂ ಸಾಲಿಗ್ರಾಮ ನಡುವಿನ ದೂರ 15 ಕಿ.ಮೀ.

‘ದುಬಾರಿ ದರ’ದಿಂದ ಬೇಸತ್ತ ಪ್ರಯಾಣಿಕರು ಖಾಸಗಿ ಬಸ್‌ನಲ್ಲಿ ಸಾಲಿಗ್ರಾಮದಿಂದ ಬೆಂಗಳೂರಿಗೆ ಮುಂಗಡ ಬುಕ್ಕಿಂಗ್‌ ಮಾಡಿದರು. ಅಲ್ಲಿ  ಇಬ್ಬರ ಪ್ರಯಾಣ ದರ ₨1100 (ಒಬ್ಬರಿಗೆ ₨550).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.